ಮದ್ರಸ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆಗೆ ಮಂಗಳೂರು ಸೆಂಟ್ರಲ್ ಕಮಿಟಿ ಒತ್ತಾಯ
ಮಂಗಳೂರು, ಫೆ.12: ದ.ಕ.ಜಿಲ್ಲೆಯ ವಿವಿಧೆಡೆ ಮದ್ರಸಕ್ಕೆ ತೆರಳುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸಂಘಪರಿವಾರದ ಕಾರ್ಯಕರ್ತರು ಪುಂಡಾಟಿಕೆ ಮಾಡುತ್ತಿದ್ದು, ಇದನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸೂಕ್ತ ರಕ್ಷಣೆ ನೀಡಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಮುಖಂಡ ಅಲಿ ಹಸನ್ ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ನಗರದ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬೆಳಗ್ಗೆ ಮತ್ತು ರಾತ್ರಿ ಮದ್ರಸ ತರಗತಿಗಳು ನಡೆಯುತ್ತಿದೆ. ಈ ಸಂದರ್ಭ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗುಂಪಾಗಿ ಅಥವಾ ಒಂಟಿಯಾಗಿ ಮದ್ರಸಕ್ಕೆ ತೆರಳುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಾಗದಿದ್ದರೂ ಕೂಡ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ನಡೆಯುವ ಸಾಧ್ಯತೆಯೇ ಹೆಚ್ಚು. ಕೆಲವು ತಿಂಗಳ ಹಿಂದೆ ಕಿನ್ನಿಗೋಳಿಯಲ್ಲಿ ಬಾಲಕಿಯ ಕೈ ಹಿಡಿದೆಳೆದ ಘಟನೆ ನಡೆದಿದ್ದರೆ, ಸೋಮವಾರ ಮಲಾರ್ ಉಗ್ಗನಬೈಲ್‌ನಲ್ಲಿ ಮೂವರು ವಿದ್ಯಾರ್ಥಿನಿಯರನ್ನು ಸಂಘ ಪರಿವಾರದ ಕಾರ್ಯಕರ್ತರು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ವಿದ್ಯಾರ್ಥಿನಿಯರ ಮತ್ತು ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡದೊಂದು ದುರಂತ ನಡೆಯುವುದು ತಪ್ಪಿದೆ. ಪೊಲೀಸರು ಕೂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇಂತಹ ಪ್ರಕರಣ ಮರುಕಳಿಸದಿರಲು ಪೋಷಕರು ಕೂಡ ಎಚ್ಚೆತ್ತುಕೊಳ್ಳಬೇಕಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ತುಂಬಾ ಕಾಳಜಿ ವಹಿಸುವ ಪೋಷಕರು ಮದ್ರಸಕ್ಕೆ ಕಳುಹಿಸುವಾಗ ನಿರ್ಲಕ್ಷ ತಾಳುವುದರಿಂದ ಇಂತಹ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಪೋಷಕರು ಕೂಡಾ ಪರ್ಯಾಯ ವ್ಯವಸ್ಥೆಗೆ ಯೋಚಿಸಬೇಕಿದೆ ಎಂದು ಅಲಿ ಹಸನ್ ಒತ್ತಾಯಿಸಿದ್ದಾರೆ.





