ಕದ್ರಿ ಪಾರ್ಕ್ ಜ್ಯೂಸ್ ವ್ಯಾಪಾರಿಗಳ ತೇಜೋವಧೆಗೆ ಯತ್ನದ ವಿರುದ್ಧ ದೂರು

ಮಂಗಳೂರು, ಫೆ.12: ಕದ್ರಿ ಪಾರ್ಕ್ ಬಳಿಯ ಜ್ಯೂಸ್ ಅಂಗಡಿದಾರರ ತೇಜೋವಧೆ ಮಾಡುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯೊಂದು ಜ್ಯೂಸಿಗೆ ಬಳಸಲಾಗುವ ಮಂಜುಗಡ್ಡೆಯನ್ನು ಚಪ್ಪರಿಸುವ ವೀಡಿಯೋ ಹರಿಯಬಿಟ್ಟಿರುವ ಕ್ರಮವನ್ನು ಖಂಡಿಸಿರುವ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿಗೆ ಮನವಿ ಸಲ್ಲಿಸಿದೆ.
ಈ ವೀಡಿಯೋದಿಂದ ಕದ್ರಿ ಪಾರ್ಕ್‌ನ ಜ್ಯೂಸ್ ಸ್ಟಾಲ್ಗಳ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಡಲಾಗಿದೆ. ಇದೊಂದು ವ್ಯವಸ್ಥಿತ ಹುನ್ನಾರವಾಗಿದೆ. ಈ ಪಾರ್ಕ್ ಪರಿಸರದಲ್ಲಿ ಇಂತಹ ಯಾವುದೇ ಕೃತ್ಯ ನಡೆದಿಲ್ಲ ಎಂದು ಸಂಘದ ಮುಖಂಡರು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ನೇತೃತ್ವದಲ್ಲಿದ್ದ ನಿಯೋಗದಲ್ಲಿ ಮುಖಂಡರಾದ ಮುಹಮ್ಮದ್ ಮುಸ್ತಫಾ, ಹರೀಶ್ ಪೂಜಾರಿ, ಆದಮ್ ಬಜಾಲ್, ಆಸೀಫ್ ಬಾವು, ಸಿ.ಎಸ್ ಶಂಕರ್, ಕದ್ರಿ ಫಾರ್ಕ್‌ನ ಜ್ಯೂಸ್ ಮಾರಾಟಗಾರರ ಪ್ರತಿನಿಧಿಗಳಾದ ಕ್ಲೋಡಿ ಡಿಸೋಜ, ವಿಶ್ವನಾಥ್ ಶೆಟ್ಟಿ, ಅಬೂಬಕರ್, ಬ್ರಹ್ಮಪುತ್ರ,ವಿಶ್ವನಾಥ್ ಪೂಜಾರಿ, ಧರ್ಮರಾಜ್ ಉಪಸ್ಥಿತರಿದ್ದರು.





