ಕರ್ನಾಟಕ ಬಂದ್: ಸಂಘಟನೆಗಳಿಂದ ಸಾಂಕೇತಿಕ ಪ್ರತಿಭಟನೆ, ಜನತೆಯಿಂದ ನೈತಿಕ ಬೆಂಬಲ
ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ

ಬೆಂಗಳೂರು, ಫೆ.13: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಕೆಲವೆಡೆ ಕನ್ನಡಪರ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದನ್ನು ಹೊರತು ಪಡಿಸಿ ಜನಜೀವನ ಎಂದಿನಂತೆ ಸಹಜವಾಗಿತ್ತು.
ಬೆಂಗಳೂರಿನ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಕನ್ನಡ ಧ್ವಜವನ್ನು ಹಿಡಿದು, ಸರೋಜಿನಿ ಮಹಿಷಿ ವರದಿ ಜಾರಿಯಾಗಲಿ, ಕನ್ನಡಿಗರ ಬದುಕು ಹಸನಾಗಲಿ ಎಂಬ ಘೋಷಣೆ ಕೂಗುತ್ತಾ ರ‍್ಯಾಲಿಯಲ್ಲಿ ಸಾಗಿದರು. ಸರೋಜಿನಿ ಮಹಿಷಿ ವರದಿ ಜಾರಿಯಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದು, ಜನಜೀವನ ಎಂದಿನಂತಿತ್ತು. ಆದರೆ ವಾಹನಗಳ ಸಂಖ್ಯೆ ಇತರ ದಿನಗಳಿಗೆ ಹೋಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಇತ್ತು. ಹೊಟೇಲ್‌ಗಳು, ಚಿತ್ರಮಂದಿರಗಳು, ಶಾಲಾ- ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಆಟೋ ಚಾಲಕರ ಸಂಘ ಬಂದ್‌ಗೆ ಬೆಂಬಲ ಸೂಚಿಸಿತ್ತು. ಆದರೆ, ಜನನಿಬಿಡ ಪ್ರದೇಶವಾದ ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಯಶವಂತಪುರ, ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ಆಟೋಗಳು, ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು. ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಕಲಬುರಗಿ, ಬೀದರ್, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕರ್ನಾಟಕ ಬಂದ್‌ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ವಾಹನಗಳ ಸಂಚಾರ, ಜನಜೀವನ ಯಥಾಸ್ಥಿತಿಯಲ್ಲಿತ್ತು.
ರೌಡಿ ಶೀಟರ್‌ಗಳು ವಶಕ್ಕೆ
ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರೆ ನೀಡಿದ್ದ ರಾಜ್ಯಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ನಗರಾದ್ಯಂತ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ 2 ಎಸಿಪಿ, 5 ಇನ್‌ಸ್ಪೆಕ್ಟರ್, 15 ಪಿಎಸ್‌ಐ ಸೇರಿದಂತೆ 400 ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಬಂದ್ ನೆಪದಲ್ಲಿ ಹಾಗೂ ಪ್ರತಿಭಟನೆಯ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ನಗರದ ಸುಮಾರು 150ಕ್ಕೂ ಹೆಚ್ಚು ರೌಡಿ ಶೀಟರ್‌ಗಳನ್ನು ವಶಕ್ಕೆ ಪಡೆಯಲಾಯಿತು.
ಕನ್ನಡಿಗರ ಉದ್ಯೋಗ ಭದ್ರತೆಗಾಗಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕಳೆದ 100ದಿನಗಳಿಂದ ನಗರದಲ್ಲಿ ಧರಣಿ ನಡೆಸಿ, ನಂತರ ಇಂದು(ಫೆ.13) ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಕರ್ನಾಟಕ ಬಹುತೇಕ ಎಲ್ಲ ಸಂಘಟನೆಗಳು, ಸಂಘ, ಸಂಸ್ಥೆಗಳು ಬಂದ್‌ಗೆ ನೈತಿಕ ಬೆಂಬಲ ಸೂಚಿಸುವ ಮೂಲಕ ಬಂದ್‌ನ್ನು ಯಶಸ್ವಿಗೊಳಿಸಿದ್ದಾರೆ. ಸರಕಾರವೂ ಸರೋಜಿನಿ ಮಹಿಷಿ ವರದಿ ಜಾರಿ ಮಾಡುವ ನಿಟ್ಟಿನಲ್ಲಿ ಚರ್ಚೆಗೆ ಆಹ್ವಾನಿಸಿರುವುದು ಒಳ್ಳೆಯ ಬೆಳವಣಿಗೆ
-ನಾಗೇಶ್, ಅಧ್ಯಕ್ಷ, ಕನ್ನಡ ಸಂಘಟನೆಗಳ ಒಕ್ಕೂಟ







