ಒಡೆದಾಳುವ ನೀತಿಗೆ ಮತದಾರರು ಮನ್ನಣೆ ನೀಡಿಲ್ಲ: ದಿಲ್ಲಿ ಫಲಿತಾಂಶದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ

ಬೆಳಗಾವಿ, ಫೆ.13: ದಿಲ್ಲಿ ಚುನಾವಣೆಯಲ್ಲಿ ಬಿಜೆಪಿಯ ಒಡೆದು ಆಳುವ ನೀತಿಗೆ ಮತದಾರರು ಮನ್ನಣೆ ನೀಡಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಗುರುವಾರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಬೆಳಗಾವಿ ವಿಮಾನ ನಿಲ್ಧಾಣದಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ಅವರು, ಚುನಾವಣೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ದಿಲ್ಲಿ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟು ಮಾಡಲಾಗಿದೆ. ಆದರೆ, ಮತದಾರರ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದರು.
ದಿಲ್ಲಿಯಲ್ಲಿ ಬಿಜೆಪಿಯು ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಿ, ಗೆಲ್ಲಲು ಪ್ರಯತ್ನ ಮಾಡಿತ್ತು. ಆದರೆ, ಬಿಜೆಪಿಯ ಯತ್ನ ಕೈಗೂಡಲಿಲ್ಲ ಎಂದ ಅವರು, ಮೋದಿ ಹಾಗೂ ಶಾ ಜನರನ್ನು ಎಷ್ಟು ದಿನಗಳ ಕಾಲ ಭಾವನಾತ್ಮಕವಾಗಿ ಸೆಳೆಯಲು ಸಾಧ್ಯ ಎಂದು ಅವರು ದೂರಿದರು.
ಕಾಂಗ್ರೆಸ್ ಸೋಲಿನ ಬಗ್ಗೆ ವರ್ಕಿಂಗ್ ಕಮಿಟಿಯಲ್ಲಿ ಚರ್ಚೆ ಮಾಡುತ್ತೇವೆ. ನಾನು ಕಲಬುರಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿಶೇಷ ಸ್ಥಾನಮಾನ ಕೊಡಿಸಿದ್ದೇನೆ. ರೈಲ್ವೆ ಮಾರ್ಗ, ಬೋಗಿ ಕಾರ್ಖಾನೆ ಆರಂಭಿಸಿದ್ದೇನೆ. ಯಾವುದೇ ಕಳಂಕ ಇಲ್ಲದೇ ಕೆಲಸ ಮಾಡಿದ್ದೇವೆ. ಆದರೂ, ಚುನಾವಣೆಯಲ್ಲಿ ಸೋತಿದ್ದು, ಮತದಾರರ ತೀರ್ಪಿಗೆ ತಲೆಬಾಗಿದ್ದೇನೆ ಎಂದರು.
ಸುಪ್ರೀಂ ಕೋರ್ಟ್ ಮೀಸಲಾತಿ ಬಗ್ಗೆ ಟಿಪ್ಪಣಿ ವಿಚಾರ ಪ್ರಸ್ತಾಪಿಸಿದ ಅವರು ಸುಪ್ರೀಂ ಕೋರ್ಟ್ ನಿರ್ಧಾರ ತಪ್ಪು ಇದೆ ಎಂದು ಹೇಳಿದ್ದೇನೆ. ಮೂಲಭೂತವಾಗಿ ಮೀಸಲಾತಿ ಸಂವಿಧಾನದಲ್ಲಿ ಇರೋ ಹಕ್ಕು. ಹೀಗಾಗಿ ಟಿಪ್ಪಣಿಯನ್ನು ನಾನು ಖಂಡಿಸುತ್ತೇನೆ ಎಂದರು. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ನೇಮಕ ಆಗಲಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಹೇಳಿದರು.







