ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಶೂ, ಸಾಕ್ಸ್ ಪೂರೈಕೆ ಆರೋಪ: ಏಳು ಮುಖ್ಯ ಶಿಕ್ಷಕರ ಅಮಾನತು

ರಾಯಚೂರು, ಫೆ.13: ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿಯ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಸಿ ವಿತರಿಸುವ ವೇಳೆ, ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಏಳು ಜನ ಮುಖ್ಯ ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಸರಕಾರ ಸೂಚಿಸಿದ ಮಾನದಂಡಗಳನ್ನು ಉಲ್ಲಂಘಿಸಿ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್ ಒದಗಿಸಿದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ರಾಯಚೂರಿನ ಎಲ್‌ಬಿಎಸ್ ಕಾಲನಿ ಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ನಾಯಕ, ಬಿಜನಗೇರಾದ ಶಾಲೆಯ ಮುಖ್ಯ ಶಿಕ್ಷಕ ಅರುಣಕುಮಾರ್ ದೇಸಾಯಿ, ಮಲಿಯಾಬಾದ್‌ನ ಮುಖ್ಯ ಶಿಕ್ಷಕಿ ಅಲಿಸಾ, ದೇವದುರ್ಗದ ಆಕಳಕುಂಪಿಯ ಮುಖ್ಯ ಶಿಕ್ಷಕ ಕೊಟ್ರೇಶ, ಚಿಂಚೋಡಿ ಶಾಲೆಯ ಮುಖ್ಯಶಿಕ್ಷಕ ಮಹಾಂತೇಶ, ಆಲ್ಕೋಡ ಗ್ರಾಮದ ಶಾಲೆಯ ಮುಖ್ಯಶಿಕ್ಷಕ ಬಸವರಾಜ, ಮಾನ್ವಿ ತಾಲೂಕಿನ ರಾಜಲಬಂಡ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಅವರನ್ನು ಅಮಾನತುಗೊಳಿಸಿ ಡಿಡಿಪಿಐ ಬಿ.ಎಚ್.ಗೋನಾಳ್ ಆದೇಶ ಹೊರಡಿಸಿದ್ದಾರೆ.
ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್‌ಗಳನ್ನು ಒದಗಿಸಲಾಗಿತ್ತು. ಈ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ತಂಡವೊಂದು ಕಳೆದ ವರ್ಷ ತನಿಖೆ ನಡೆಸಿ ವರದಿಯನ್ನು ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಿತ್ತು. ಈ ವರದಿಯಾಧರಿಸಿ ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್ ಖರೀದಿಸಿದ ಬಗ್ಗೆ ಆರೋಪ ಸಾಬೀತಾದ ಹಿನ್ನೆಲೆ ಅಮಾನತುಗೊಳಿಸಿದ್ದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶದಲ್ಲಿ ತಿಳಿಸಿದೆ.





