ರಾಷ್ಟ್ರೀಯ ಮತದಾರರ ಅಂತಿಮ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಸಿಂಧೂ

ಮಂಗಳೂರು, ಫೆ.13: ಭಾರತದ ಚುನಾವಣಾ ಆಯೋಗದ ಸೂಚನೆಯಂತೆ ರಾಷ್ಟ್ರೀಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪೂರ್ತಿಗೊಂಡಿದೆ. ಇದರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಸೇರ್ಪಡೆ ಮತ್ತೆ ಮುಂದು ವರಿಯತೊಡಗಿದೆ ಎಂದರು.
ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿ ಪ್ರಕಾರ ದ.ಕ. ಕ್ಷೇತ್ರದಲ್ಲಿ ಒಟ್ಟು 17,23,960 ಮತದಾರರಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆಗೆ ಇದ್ದ ಮತದಾರರ ಸಂಖ್ಯೆ 17,07,652. ಅಂದರೆ 16,308 ಸಂಖ್ಯೆ ಜಾಸ್ತಿಯಾಗಿದೆ. ಲಿಂಗಾನುಪಾತದಲ್ಲೂ ಏರಿಕೆಯಾಗಿದ್ದು, ಕಳೆದ ಬಾರಿ 1,037 ಇದ್ದರೆ, ಈ ಬಾರಿ 1,040ಕ್ಕೆ ತಲುಪಿದೆ. ತೃತೀಯ ಲಿಂಗಳು ಕಳೆದ ಬಾರಿ 86 ಆಗಿದ್ದರೆ, ಈ ಬಾರಿ 72 ಮಾತ್ರ ಆಗಿದೆ ಎಂದರು.
ಎಂಟು ಅಸೆಂಬ್ಲಿ ಕ್ಷೇತ್ರ ಪೈಕಿ ಮಂಗಳೂರು ದಕ್ಷಿಣದಲ್ಲಿ ಗರಿಷ್ಠ 2,40,033 ಮತದಾರರಿದ್ದು, ಇದೇ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ 1,25,221 ಮಹಿಳಾ ಮತದಾರರಿದ್ದಾರೆ. ಉಳಿದಂತೆ ಬೆಳ್ತಂಗಡಿಯಲ್ಲಿ 2,17,146, ಮೂಡುಬಿದಿರೆಯಲ್ಲಿ 2,02,113, ಮಂಗಳೂರು ಉತ್ತರ ದಲ್ಲಿ 2,39,368, ಮಂಗಳೂರು 1,97,531, ಬಂಟ್ವಾಳ 2,21,837, ಪುತ್ತೂರು 2,05,170 ಹಾಗೂ ಸುಳ್ಯದಲ್ಲಿ 2,00,762 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 8,44,955 ಪುರುಷ ಹಾಗೂ 8,78,933 ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿಯೂ ಮಹಿಳಾ ಮತದಾರರ ಸಂಖ್ಯೆಯೇ ಮುಂಚೂಣಿಯಲ್ಲಿತ್ತು. ಜನವರಿಯಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಹಮ್ಮಿಕೊಂಡ ಮಿಂಚಿನ ನೋಂದಣಿ ಪರಿಣಾಮ ಒಟ್ಟು 18,728 ಮತದಾರರ ನೋಂದಣಿಯಾಗಿದೆ. ಫಾರಂ 6 ಅಡಿಯಲ್ಲಿ 9,992, ಫಾರಂ 7ನಲ್ಲಿ 4,332, ಫಾರಂ 8ನಲ್ಲಿ 4,172 ಹಾಗೂ ಫಾರಂ 8ಎ ಅಡಿಯಲ್ಲಿ 232 ಮತದಾರರ ನೋಂದಣಿಯಾಗಿದೆ. ವಿಶೇಷ ಪರಿಷ್ಕರಣೆಯಲ್ಲಿ ಒಟ್ಟು 59,792 ಮಂದಿ ಸೇರ್ಪಡೆಯಾಗಿದ್ದರು ಎಂದು ತಿಳಿಸಿದರು.
28,479 ಯುವ ಮತದಾರರು: ದ.ಕ. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಒಟ್ಟು 28,479 ಯುವ ಮತದಾರರ ಸೇರ್ಪಡೆ ಯಾಗಿದೆ. ಮತಗಟ್ಟೆ ಮೂಲಕ 16,834 ಹಾಗೂ 11,645 ಮಂದಿ ವಿಶೇಷ ಅಭಿಯಾನ ವೇಳೆ ನೋಂದಣಿಯಾಗಿದ್ದಾರೆ ಎಂದರು.
ಬಸ್ ದರ ಏರಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲು ಸಾರಿಗೆ ಪ್ರಾಧಿಕಾರದ ಸಭೆಯನ್ನು ಶೀಘ್ರವೇ ಕರೆಯಲಾಗುವುದು ಎಂದು ಡಿಸಿ ಸಿಂಧು ರೂಪೇಶ್ ತಿಳಿಸಿದರು.
ಟೋಲ್‌ಗೇಟ್‌ಗಳಲ್ಲಿ ದರ ಹೆಚ್ಚಳವಾಗಿದೆ ಎಂದು ಖಾಸಗಿ ಬಸ್ ಮಾಲಕರು ಬಸ್ ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡುವಂತೆ ಇಲ್ಲ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದರು. ಮತದಾರರಿಗೆ ಮತದಾರರ ಪಟ್ಟಿಗೆ ಸಂಬಂಧಿಸಿ ವಿಚಾರಿಸಲು ಸಹಾಯವಾಣಿ (1950) ಸ್ಥಾಪಿಸಲಾಗಿದೆ. ಮತದಾರರ ಮತಗಟ್ಟೆಗೆ ಸಂಬಂಧಿಸಿ ಮಾಹಿತಿಯನ್ನು ದೂರವಾಣಿ ಮೂಲಕ ಪಡೆಯ ಬಹುದು. ಅಲ್ಲದೆ ಜಿಲ್ಲೆಯ ಎಲ್ಲ ಮತದಾರರ ನೋಂದಣಾಧಿಕಾರಿ/ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಕೂಡ ಪರಿಶೀಲಿಸಬಹುದು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಬಗ್ಗೆ ಹಾಗೂ ಹೆಚ್ಚುವರಿ ಮಾಹಿತಿಯನ್ನು ceokarnataka.kar.nic.in ವೆಬ್‌ಸೈಟ್‌ನಲ್ಲಿ ತಿಳಿಯಬಹುದು. ಮತದಾರರ ಪಟ್ಟಿಗೆ ಸೇರ್ಪಡೆಯಾದವರಿಗೆ ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್) ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಉಪಸ್ಥಿತರಿದ್ದರು.
ಕೆಇಟಿ ಆದೇಶದಂತೆ ಕ್ರಮ
ಮಂಗಳೂರು ಸಹಾಯಕ ಕಮಿಷನರ್ ವರ್ಗಾವಣೆ ವಿಚಾರವನ್ನು ಕೆಇಟಿ ಆದೇಶದ ಪ್ರಕಾರ ಕಾರ್ಯಗತಗೊಳಿಸಲಾಗುವುದು. ರವಿಚಂದ್ರ ನಾಯಕ್ ಅವರು ವರ್ಗಾವಣೆ ಪ್ರಶ್ನಿಸಿ ಕೆಇಟಿ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಆದ್ದರಿಂದ ಅವರು ಮರಳಿ ಅಧಿಕಾರ ಸ್ವೀಕರಿ ಸಬೇಕಾದರೆ, ಕೆಇಟಿ ಮತ್ತೆ ಆದೇಶ ಹೊರಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸ್ಪಷ್ಟಪಡಿಸಿದರು.
ಕೆಇಟಿ ವರ್ಗಾವಣೆಗೆ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರು ಎಸಿ ಕಚೇರಿಗೆ ಆಗಮಿಸಿ ಮರಳಿ ಅಧಿಕಾರ ಸ್ವೀಕರಿಸಲು ಮುಂದಾಗಿದ್ದರು. ಆದರೆ ಹಾಲಿ ಸಹಾಯಕ ಕಮಿಷನರ್ ಅವರು ಆದೇಶ ಇಲ್ಲದ ಕಾರಣಕ್ಕೆ ಅಧಿಕಾರ ಹಸ್ತಾಂತರಿಸಿರಲಿಲ್ಲ ಎಂದು ಅವರು ತಿಳಿಸಿದರು
‘ತಿಂಗಳ ಆರಂಭದಲ್ಲೇ ಪಡಿತರ’
ಪಡಿತರ ಚೀಟಿದಾರರಿಗೆ ಪಡಿತರವನ್ನು ತಿಂಗಳ ಕೊನೆಯ ಬದಲು ಆರಂಭದಿಂದಲೇ ನೀಡಬೇಕು. ಪಡಿತರ ಹಂಚಿಕೆಗೆ ಆನ್‌ಲೈನ್ ವ್ಯವಸ್ಥೆ ಕೈಕೊಟ್ಟರೆ ಕೈಬರಹ ಮೂಲಕ ಹಳೆ ವಿಧಾನದಲ್ಲಿ ನೀಡುವ ಕುರಿತಂತೆ ಪರಿಶೀಲನೆ ನಡೆಸಲಾಗುವುದು ಎಂದು ಡಿಸಿ ಸಿಂಧು ರೂಪೇಶ್ ಹೇಳಿದರು. ಪಿಲಿಕುಳದಲ್ಲಿ ಸರಕಾರಿ ಕಂಬಳ ನಡೆಸುವ ಬಗ್ಗೆ ಅನುದಾನದ ಕೊರತೆ ಇದೆ. ಆದ್ದರಿಂದ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.







