ಮೀಸಲಾತಿ ಬಗ್ಗೆ ಸುಪ್ರೀಂ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಲಿ: ಮಾಜಿ ಸಂಸದ ಧ್ರುವನಾರಾಯಣ

ಮೈಸೂರು,ಫೆ.13: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಕುರಿತ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ವ್ಯಾಖ್ಯಾನದ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಲು ಮಾಜಿ ಸಂಸದ ಆರ್.ಧ್ರುವನಾರಾಯಣ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರಾಖಂಡ ರಾಜ್ಯಕ್ಕೆ ಸಂಬಂಧಿಸಿದ ಸಿವಿಲ್ ಅಪೀಲ್ ಮೊಕದ್ದಮೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿದೆ. ಉತ್ತರಾಖಂಡ ರಾಜ್ಯವು ಪ.ಜಾತಿ, ಪ.ಪಂಗಡದವರಿಗೆ ಬಡ್ತಿಯಲ್ಲಿ ಒದಗಿಸಿಕೊಡಬೇಕಿದ್ದ ಮೀಸಲಾತಿಗೆ ಸಂಬಂಧಿಸಿದಂತೆ ಉತ್ತರಾಖಂಡದ ಹೈಕೋರ್ಟ್ ತೀರ್ಪು ನೀಡಿತ್ತು. ಅದೇ ವಿಷಯವಾಗಿ ಸಿವಿಲ್ ಅಪೀಲ್ ಮೊಕದ್ದಮೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿದೆ. ಹಾಗೆ ತೀರ್ಪು ನೀಡುವಾಗ ಪ.ಜಾತಿ, ಪ.ಪಂಗಡದವರಿಗೆ ಸರ್ಕಾರ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವುದು ರಾಜ್ಯಗಳ ವಿವೇಚನಾಧಿಕಾರವಾಗಿದೆ ಎಂದಿದೆ. ಮೀಸಲಾತಿಯು ಮೂಲಭೂತ ಹಕ್ಕಲ್ಲ ಎಂಬ ವ್ಯಾಖ್ಯಾನವನ್ನು ನೀಡಿದೆ. ಇದು ಬಹಳ ಅಪಾಯಕಾರಿ ವ್ಯಾಖ್ಯಾನ. ಅಸಾಂವಿಧಾನಿಕ. ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ವಿರುದ್ಧವಾಗಿದೆ ಎಂದರು.
ಇದಕ್ಕೆಲ್ಲ ಕಾರಣ ಬಿಜೆಪಿ ಮೀಸಲಾತಿಯ ವಿರುದ್ಧವಾಗಿರುವುದಾಗಿದೆ. ಉತ್ತರಾಖಂಡ ರಾಜ್ಯದ ಬಿಜೆಪಿ ಸರ್ಕಾರ ಮೀಸಲಾತಿಯು ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿದೆ. ಅದರಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ದುರದೃಷ್ಟಕರ ಎಂದರು. ಆರೆಸ್ಸೆಸ್ ನ ಸರಸಂಘ ಸಂಚಾಲಕ ಮೋಹನ್ ಭಾಗವತ್ ಅವರು ಮತ್ತವರ ಪತ್ರಿಕಾ ಕಾರ್ಯದರ್ಶಿ ಮನಮೋಹನ್ ವೈದ್ಯ ಅವರು ಮೀಸಲಾತಿಯ ವಿರುದ್ಧವಾಗಿ ಹಲವಾರು ಸಾರಿ ಹೇಳಿಕೆ ನೀಡಿದ್ದಾರೆ ಎಂದರು.
ಸಂಘಪರಿವಾರ ಮತ್ತು ಭಾಜಪವು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ದಿಲ್ಲಿಯಲ್ಲಿ ಸಂತ ರವಿದಾಸರ ದೇವಸ್ಥಾನವನ್ನು ಕೆಡವಿ ಹಾಕಿದರು. ಪ.ಜಾತಿ, ಪ.ಪಂಗಡದ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿದವು. ಕಾಂಗ್ರೆಸ್ ಪಕ್ಷವು ಸಂಸತ್ ನಲ್ಲಿ ಹೋರಾಟ ಮಾಡಿದ ನಂತರ ದೌರ್ಜನ್ಯ ತಡೆ ಕಾಯ್ದೆಯನ್ನು ಬಲಪಡಿಸಲಾಗಿದೆ. ಕೇಂದ್ರ ಸರ್ಕಾರವು ಪರಿಶಿಷ್ಟರ ಹಿಂಬಾಕಿ ಹುದ್ದೆಗಳನ್ನು ತುಂಬುತ್ತಿಲ್ಲ. ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು 2014ರಿಂದಲೂ ಪರಿಷ್ಕರಣೆ ಮಾಡಿಲ್ಲ. ಒಟ್ಟಾರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಲಿತ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರದಲ್ಲಿರುವುದರಿಂದ ಹಿಂದುತ್ವ ಅಜೆಂಡಾ ಮತ್ತದರ ರಹಸ್ಯ ಕಾರ್ಯ ಸೂಚಿಗಳ ಎಳೆಯ ಮಾರ್ಗದಲ್ಲಿ ಸರ್ಕಾರದ ಬಹುತೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂಬ ಅನುಮಾನಗಳಿವೆ. ಇದಕ್ಕೆ ನ್ಯಾಯಾಂಗವೂ ಹೊರತಾಗಿಲ್ಲ. ನ್ಯಾಯಾಂಗದ ಮೇಲೆ ಹಿಂದುತ್ವದ ಕರಾಳ ಛಾಯೆಯಿರುವುದು ನಿಚ್ಚಳವಾಗುತ್ತಿದೆ ಎಂದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ ಹಾಗೂ ಅದರ ಮಿತ್ರ ಪಕ್ಷಗಳು ತಾವು ಸಂವಿಧಾನ ಪರ ಎಂಬುದನ್ನು ನಿರೂಪಿಸಲು ಸುಪ್ರೀಂ ಕೋರ್ಟಿನ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಮಂಜುಳ ಮಾನಸ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.







