ಮಂಗಳೂರು: ಮಲಗಿದ್ದ ಕಾರ್ಮಿಕನ ಮೇಲೆ ಚಲಿಸಿದ ಲಾರಿ; ಸ್ಥಳದಲ್ಲೇ ಮೃತ್ಯು
ಮಂಗಳೂರು : ನಗರದ ಜಪ್ಪು ಕುಡ್ಪಾಡಿ ಬಳಿಯ ಕಟ್ಟಿಗೆ ಡಿಪೊವೊಂದರ ಮುಂದೆ ಮಲಗಿದ್ದ ಕಾರ್ಮಿಕನ ಮೇಲೆ ಲಾರಿ ಚಲಿಸಿದ ಪರಿಣಾಮ ಕಾರ್ಮಿಕ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಹುಬ್ಬಳ್ಳಿ ಮೂಲದ ಸುಧಾಕರ (55) ಮೃತಪಟ್ಟ ಕಾರ್ಮಿಕ. ಇವರು ಕಟ್ಟಿಗೆ ಡಿಪೊದಲ್ಲಿ ಕೂಲಿ ಕೆಲಸ ಮಾಡುತ್ತಾ ರಾತ್ರಿ ವೇಳೆ ಅಲ್ಲಿಯೇ ಮಲಗುತ್ತಿದ್ದರು. ಗುರುವಾರ ರಾತ್ರಿ ಸುಧಾಕರ ಮತ್ತು ಇತರ ಇಬ್ಬರು ಡಿಪೊ ಎದುರಿನ ಅಂಗಳದಲ್ಲಿ ಮಲಗಿದ್ದರು. ಶುಕ್ರವಾರ ಮುಂಜಾನೆ ಸುಧಾಕರ ಅವರನ್ನು ಹೊರತು ಪಡಿಸಿ ಉಳಿದ ಇಬ್ಬರು ಎಚ್ಚರಗೊಂಡು ಎದ್ದು ಆಚೆ ಕಡೆ ಹೋಗಿದ್ದರು. ಮುಂಜಾನೆ ಸುಮಾರು 5:45ರ ವೇಳೆಗೆ ಸುಧಾಕರ ಮಲಗಿದ್ದಾಗಲೇ ಅವರ ತಲೆಯ ಮೇಲೆ ಲಾರಿಯೊಂದು ಹಾದು ಹೋಗಿದೆ ಎನ್ನಲಾಗಿದೆ. ಇದರಿಂದ ತೀವ್ರ ಗಾಯಗೊಂಡ ಸುಧಾಕರ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ದಾರಿ ತಪ್ಪಿ ಬಂದ ಲಾರಿ
ಸುಧಾಕರ ಅವರ ಸಾವಿಗೆ ಕಾರಣನಾದ ಲಾರಿಯ ಚಾಲಕನು ದಾರಿ ತಪ್ಪಿ ಬಂದಿದ್ದ ಎನ್ನಲಾಗಿದೆ. ನಗರದ ಹಂಪನಕಟ್ಟೆಗೆ ಆಗಮಿಸಿದ್ದ ಲಾರಿಯು ನೀರುಮಾರ್ಗ ಕಡೆಗೆ ಚಲಿಸಬೇಕಿತ್ತು. ಆದರೆ ಚಾಲಕನಿಗೆ ದಾರಿ ತಪ್ಪಿ ಜಪ್ಪು ಕುಡ್ಪಾಡಿ ಮಾರ್ಗದಲ್ಲಿ ಲಾರಿ ಚಲಾಯಿಸಿದ್ದನು. ಕುಡ್ಪಾಡಿ ಬಳಿ ಒಳ ಚರಂಡಿ ಕಾಮಗಾರಿ ಪ್ರಯುಕ್ತ ರಸ್ತೆ ಅಗೆದಿದ್ದು, ಹಾಗಾಗಿ ಲಾರಿ ಚಾಲಕನು ಲಾರಿಯನ್ನು ಕಟ್ಟಿಗೆ ಡಿಪೊ ಎದುರಿದ್ದ ಖಾಲಿ ಜಾಗದಲ್ಲಿ ಚಲಾಯಿಸಿದ್ದನು. ಹಾಗೆ ಚಲಾಯಿಸುವಾಗ ಅಲ್ಲಿ ವ್ಯಕ್ತಿಯೊಬ್ಬರು ಮಲಗಿರುವುದು ಚಾಲಕನ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಸುಧಾಕರ ಅವರ ತಲೆ ಮೇಲೆ ಲಾರಿ ಚಲಿಸಿದಾಗ ಅಲ್ಲಿಯೇ ಅನತಿ ದೂರದಲ್ಲಿದ್ದ ಉಳಿದ ಇಬ್ಬರಿಗೆ ವಿಷಯ ಗೊತ್ತಾಗಿದ್ದು, ಅವರು ಬೊಬ್ಬೆ ಹಾಕಿದ್ದಾರೆ. ಅಷ್ಟರಲ್ಲಿ ಚಾಲಕ ಲಾರಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ಘಟನೆಗೆ ಕಾರಣವಾದ ಲಾರಿಯು ಶಿವಮೊಗ್ಗದ್ದೆಂದು ಗೊತ್ತಾಗಿದೆ. ಲಾರಿ ಮಾಲಕರನ್ನು ಪತ್ತೆ ಮಾಡಿ ವಿಚಾರಿಸಿದಾಗ ಈ ಲಾರಿ ನಗರದ ಮಾರ್ಕೆಟ್‌ಗೆ ತರಕಾರಿಯನ್ನು ಹೊತ್ತು ತಂದಿದ್ದು, ಅನ್‌ಲೋಡ್ ಆದ ಬಳಿಕ ನೀರುಮಾರ್ಗ ಮಾರ್ಗವಾಗಿ ಮಲ್ಲೂರು ಕಡೆಗೆ ಹೋಗಬೇಕಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಸೂಚನಾ ಫಲಕ ಇರಲಿಲ್ಲ
ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಆಗೆದಿರುವ ಜಾಗದಲ್ಲಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರು ಸೂಚನಾ ಫಲಕ ಅಳವಡಿಸಬೇಕಿತ್ತು. ಸೂಚನಾ ಫಲಕ ಇರುತ್ತಿದ್ದರೆ ವಾಹನಗಳು ಈ ಮಾರ್ಗವಾಗಿ ಚಲಿಸುತ್ತಿರಲ್ಲಿಲ್ಲ. ಇಲ್ಲಿ ಗುತ್ತಿಗೆದಾರರು ಸೂಚನಾ ಫಲಕ ಅಳವಡಿಸುವ ಬಗ್ಗೆ ನಿರ್ಲಕ್ಷ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪ್ರಕರಣ ದಾಖಲಿಸಿರುವ ಟ್ರಾಫಿಕ್ ಪೂರ್ವ ಠಾಣೆಯ ಪೊಲೀಸರು ತಿಳಿಸಿದ್ದಾರೆ.







