ಆರ್ಥಿಕ , ಸಾಮಾಜಿಕ ಅಸಮಾನತೆ ಹೋಗಲಾಡಿಸದೆ ದೇಶದ ರಾಜಕೀಯ ಸ್ವಾತಂತ್ರ ಅರ್ಥಹೀನ: ಪಿ.ಸಾಯಿನಾಥ್

ಮಂಗಳೂರು : ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸದೆ ದೇಶದ ರಾಜಕೀಯ ಸ್ವಾತಂತ್ರ ಅರ್ಥಹೀನ ವಾಗುತ್ತದೆ ಎಂದು ಮ್ಯಾಗ್ಸೆಸ್ ಪ್ರಶಸ್ತಿ ವಿಜೇತ ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ನಗರದ ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ 20 -29 ವರ್ಷಗಳಿಂದ ಬೆಳೆದು ಬಂದ ಆರ್ಥಿಕ ಅಸಮಾನತೆ ಕಳೆದ 6 ವರ್ಷಗಳಲ್ಲಿ ದೇಶದ ಆರ್ಥಿಕ, ಸಾಮಾಜಿಕ ಅಸಮಾನತೆ ನಾಟಕೀಯ ತಿರುವು ಪಡೆದುಕೊಂಡು ಉಲ್ಭಣಿಸಿದೆ. ನೋಟು ಅಮಾನ್ಯ, ಜಿಎಸ್‌ಟಿ ಹೇರಿಕೆ, ಗೋಹತ್ಯೆ ನಿಷೇಧ ಸೇರಿದಂತೆ ಹಲವು ಘಟನೆ ಗಳಿಂದ ಜನಸಾಮಾನ್ಯರು ಇನ್ನಷ್ಟು ತೊಂದರೆಗಿಡಾಗುವಂತೆ ಮಾಡಿದೆ. ರೈತರ ಆತ್ಮ ಹತ್ಯೆ , ನಿರುದ್ಯೋಗದ ಪ್ರಮಾಣವನ್ನು ಹೆಚ್ಚಿಸಿದೆ. ದೇಶದಲ್ಲಿ ಆರ್ಥಿಕ ಅಸಮಾನತೆಯ ಪರಿಸ್ಥಿತಿ 1991ರಿಂದ ಆರಂಭಗೊಂಡು 2014ರನಂತರ ತೀವ್ರವಾಗಿ ದೇಶದ ಜನ ಸಾಮಾನ್ಯರನ್ನು ಕಾಡತೊಡಗಿದೆ ಎಂದು ಸಾಯಿ ನಾಥ್ ವಿಶ್ಲೇಷಿಸಿದರು.
ಪೌರತ್ವದ ತಿದ್ದುಪಡಿ ಕಾಯ್ದೆ ದೇಶದ ಸಂವಿಧಾನಕ್ಕೆ ವಿರೋಧವಾಗಿದೆ :- ಪೌರತ್ವ ತಿದ್ದುಪಡಿ ಕಾಯಿದೆಯನ್ನು ಒಂದು ಮತದವರನ್ನು ಹೊರತು ಪಡಿಸಿ ಜಾರಿಗೆ ತರಲು ಪ್ರಯತ್ನಿಸುತ್ತಿರುವುದು ದೇಶದ ಸಂವಿಧಾನದ ಮೇಲೆ ಮಾಡುತ್ತಿರುವ ದಾಳಿ ಮಾತ್ರವಲ್ಲ. ದೇಶದ ಜಾತ್ಯತೀತ,ಬಹು ಸಂಸ್ಕೃತಿಯನ್ನು ಎತ್ತಿಹಿಡಿದ ಸಂವಿಧಾನವನ್ನು ತಿರಸ್ಕರಿಸಿದಂತಾಗಿದೆ. ಸ್ವಾತಂತ್ರ ಸಮಾನತೆ ,ಭ್ರಾತೃತ್ವ ಸಂವಿಧಾನದ ಮೂಲ ಆಶಯವಾಗಿದೆ. ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟ ದೇಶದ ಸಂವಿಧಾನವನ್ನು ಉಳಿಸಿಕೊಳ್ಳಲು ನಡೆಯುತ್ತಿರುವ, ಏಕತೆಯ ಹೋರಾಟದ ಪ್ರತೀಕವಾಗಿದೆ. ಸ್ವಾತಂತ್ರದ ಸಂದರ್ಭದಲ್ಲಿ ದೇಶದ ಸಂವಿಧಾನ, ದೇಶದ ತ್ರಿವರ್ಣ ಧ್ವಜ, ರವೀಂದ್ರ ನಾಥ ಟ್ಯಾಗೂರ್ ರಚಿಸಿದ ಜನಗಣಮನ ಹಾಡಿನ ಬಗ್ಗೆ ಆಕ್ಷೇಪಿಸಿ ಅದನ್ನು ಬದಲಾಯಿಸಲು ಯತ್ನಸಿದ ಶಕ್ತಿಗಳೆ ಇಂದು ದೇಶದ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನದಲ್ಲಿ ತೊಡಗಿವೆ ಎಂದರು.
ಸಮಾರಂಭದಲ್ಲಿ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ.ಡಯೋನಿಸಿಯಸ್ , ಪ್ರಾಂಶುಪಾಲ.ವಂ.ಪ್ರವೀಣ್ ಮಾರ್ಟಿಸ್, ಅಲೋಶಿಯಸ್ ಕಾಲೇಜು ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಮೆಲ್ವಿನ್ ಪಿಂಟೋ, ಕಾರ್ಯಕ್ರಮದ ಸಂಚಾಲಕರಾದ ದೇವಿಶ್ರೀ ಶೆಟ್ಟಿ, ಹರ್ಷಿತಾ ವರ್ಗೀಸ್, ವೈಶಾಲಿ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.












