ಮಣಿಪಾಲ: ಕಿರುಚಿತ್ರ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಸುಹಾಸ್ ಶೆಣೈ

ಉಡುಪಿ, ಫೆ.14: ಭಾರತ ಸರಕಾರ ಮಾನವ ಸಂಪನ್ಮೂಲ ಸಚಿವಾಲಯದ ಯುಜಿಸಿಯ ರ್ಯಾಗಿಂಗ್ ವಿರೋಧಿ ಕೋಶ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಣಿಪಾಲ ಸರಳೆಬೆಟ್ಟಿನ ಸುಹಾಸ್ ಶೆಣೈ ನಿರ್ಮಿಸಿದ ಆಂಗ್ಲಭಾಷಾ ಕಿರುಚಿತ್ರ ‘ಶ್ಯಾಡೋ’(ನೆರಳು) ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿ ಒಂದು ಲಕ್ಷ ರೂ.ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪುರಸ್ಕಾರ ಪತ್ರವನ್ನು ಗೆದ್ದುಕೊಂಡಿದೆ.
ಫೆ.11ರಂದು ಹೊಸದಿಲ್ಲಿಯಲ್ಲಿ ಜರಗಿದ ಸಮಾರಂಭದಲ್ಲಿ ಸುಹಾಸ್ ಶೆಣೈ ಇವರು ಭಾಗವಹಿಸಿ ಯುಜಿಸಿಯ ಕಾರ್ಯದರ್ಶಿ ಪ್ರೊ. ರಜನೀಶ್ ಜೈನ್ ಹಾಗೂ ಜಂಟಿ ಕಾರ್ಯದರ್ಶಿ ಅರ್ಚನಾ ಠಾಕೂರ್‌ರಿಂದ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ಸ್ವೀಕರಿಸಿದರು.
ಈ ಕಿರುಚಿತ್ರದ ನಿರ್ಮಾಪಕರಾದ ಸುಹಾಸ್ ಶೆಣೈ ಚಿತ್ರಕ್ಕೆ ಸಂಗೀತ ಒದಗಿಸಿದ್ದಲ್ಲದೇ ಸಂಕಲನ ಕಾರ್ಯವನ್ನೂ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಅರ್ಜುನ ರಾವ್, ಶೈನಿ ಡಿಸೋಜ, ಹರಿಪ್ರಸಾದ್, ಸುಮಂತ್, ಸೂರಜ್ ಆಚಾರ್ಯ ಹಾಗೂ ವೀಣಾ ವಿ.ರಾಯ್ ಅಭಿನಯಿಸಿದ್ದಾರೆ.
ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನವನ್ನು ಸುಕೇಶ್ ಕುಮಾರ್ ನಿರ್ವಹಿಸಿದ್ದರೆ, ಚಿನ್ಮಯ್ ಎಸ್.ಭಟ್ ಛಾಯಾಗ್ರಾಹಕ ಹಾಗೂ ವ್ನಿೇಶ್ ನಾಯಕ್ ನಿರ್ಮಾಣದಲ್ಲಿ ಸಹಕರಿಸಿದ್ದರು.
ಈ ಕಿರುಚಿತ್ರವನ್ನು ಮಣಿಪಾಲ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಆಸುಪಾಸಿನಲ್ಲಿ ಚಿತ್ರೀಕರಿಸಲಾಗಿದೆ.ಡ್ರೀಮ್ ಕ್ರಿಯೇಷನ್ನ ಬ್ಯಾನರ್‌ನ ಅಡಿ ಯಲ್ಲಿ ಕಿರುಚಿತ್ರದ ನಿರ್ಮಾಣವಾಗಿದೆ. ಸುಹಾಸ್ ಶೆಣೈ ಇವರು ಸರಳೇಬೆಟ್ಟು ಉಮಾಮಹೇಶ್ವರ ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ಶೆಣೈ ಹಾಗೂ ಭಾನುಮತಿ ಜಿ. ಶೆಣೈ ಇವರ ಪುತ್ರರಾಗಿದ್ದಾರೆ.







