ಪ್ರೇಮಿಗಳ ದಿನದಂದೇ ಜಲಾಶಯಕ್ಕೆ ಹಾರಿ ಪ್ರೇಮಿಗಳ ಆತ್ಮಹತ್ಯೆ

ಕೂಡಿಗೆ, ಫೆ.14: ಹಾರಂಗಿ ಜಲಾಶಯದ ಹಿನ್ನೀರಿಗೆ ಜಿಗಿದು ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಇಂದು ನಡೆದಿದೆ.
ಹುಣಸೂರಿನ ಕೊತ್ತೆಗಾಲ ಗ್ರಾಮದ ನಾಗರಾಜುಗೌಡ ಎಂಬವರ ಪುತ್ರ ಸಚಿನ್ (21) ಯಮಗುಂಬ ಗ್ರಾಮದ ಜಲೇಂದ್ರ ಎಂಬವರ ಪುತ್ರಿ ಸಿಂಧುಶ್ರೀ (19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಪ್ರೇಮಿಗಳಿಬ್ಬರು ಹುಣಸೂರು ಸರಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಿಂದಲೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಇವರಿಬ್ಬರ ವಿಚಾರ ಮನೆಗೆ ತಿಳಿದು ಅಂತರ್ಜಾತಿಯಾದ ಕಾರಣ ಇಬ್ಬರ ಪ್ರೀತಿಗೆ ಎರಡೂ ಕಡೆಯವರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ನಡುವೆ ಮೃತ ಸಿಂಧುಶ್ರೀಗೆ ಪಿರಿಯಾಪಟ್ಟಣ ತಾಲೂಕಿನ ಯುವಕನೊಂದಿಗೆ ಇದೇ ಭಾನುವಾರ ಮದುಗೆ ನಿಗದಿಯಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮದಿಂದ ಸಚಿನ್‍ಗೆ ಸೇರಿದ ಬೈಕ್‍ನಲ್ಲಿ ಗುಟ್ಟಾಗಿ ಶುಕ್ರವಾರ ಬೆಳಗ್ಗೆ ಹಾರಂಗಿ ಆಗಮಿಸಿದ ಜೋಡಿ ಹಾರಂಗಿಯ ಇಡಿಸಿಎಲ್ ಘಟಕ ಸಮೀಪದಲ್ಲಿ ನೀರಿಗೆ ಹಾರಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಚಿನ್ ತನ್ನ ಸಂಬಂಧಿಕರಿಗೆ ಈ ಬಗ್ಗೆ ಕರೆ ಮಾಡಿ ವಿಷಯ ತಿಳಿಸಿದ್ದ ಎನ್ನಲಾಗಿದ್ದು, ಆತನ ಕಡೆಯವರು ಹಾರಂಗಿಗೆ ಭೇಟಿ ನೀಡುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದರು.
ಕುಶಾಲನಗರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಸಹಾಯದಿಂದ ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







