ನಿರ್ಭಯಾ ಹಂತಕರಿಗೆ ಮಾರ್ಚ್ 3 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು

ಹೊಸದಿಲ್ಲಿ, ಫೆ. 17: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳಿಗೆ ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ವಿಧಿಸಲು ದಿಲ್ಲಿ ನ್ಯಾಯಾಲಯ ಮಂಗಳವಾರ ಹೊಸ ಡೆತ್ ವಾರಂಟ್ ಹೊರಡಿಸಿದೆ.
ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳಾದ ಮುಖೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಹಾಗೂ ಅಕ್ಷಯ್ ಕುಮಾರ್ (31) ವಿರುದ್ಧ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಹೊಸ ಡೆತ್ ವಾರಂಟ್ ಹೊರಡಿಸಿದ್ದಾರೆ. ಆರೋಪಿಗಳನ್ನು ಗಲ್ಲಿಗೇರಿಸಲು ಹೊಸ ದಿನಾಂಕ ನಿಗದಿಪಡಿಸುವ ಕುರಿತು ವಿಚಾರಣಾ ನ್ಯಾಯಾಲಯ ಸಂಪರ್ಕಿಸಲು ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದ ಬಳಿಕ ಆರೋಪಿಗಳ ವಿರುದ್ಧ ಹೊಸ ಡೆತ್ ವಾರಂಟ್ ಜಾರಿಗೊಳಿಸುವಂತೆ ಕೋರಿ ನಿರ್ಭಯಾ ಹೆತ್ತವರು ಹಾಗೂ ದಿಲ್ಲಿ ಸರಕಾರ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳನ್ನು ಮೊದಲು ಜನವರಿ 22ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು. ಆದರೆ, ಕಾನೂನು ಪರಿಹಾರ ಮುಗಿಯದೇ ಇದ್ದುದರಿಂದ ಆರೋಪಿಗಳ ಗಲ್ಲು ಶಿಕ್ಷೆಯನ್ನು ಜನವರಿ 17ರಂದು ಫೆಬ್ರವರಿ 1ರಂದು 6 ಗಂಟೆಗೆ ಮುಂದೂಡಲಾಗಿತ್ತು. ಅಕ್ಷಯ್ ಕುಮಾರ್ ಹಾಗೂ ವಿನಯ್ ಶರ್ಮಾನ ಕ್ಷಮಾದಾನ ಅರ್ಜಿ ರಾಷ್ಟ್ರಪತಿ ಅವರಲ್ಲಿ ಬಾಕಿ ಇರುವುದರಿಂದ ಜನವರಿ 31ರ ವರೆಗೆ ಆರೋಪಿಗಳನ್ನು ಗಲ್ಲಿಗೇರಿಸದಂತೆ ವಿಚಾರಣಾ ನ್ಯಾಯಾಲಯ ತಡೆ ನೀಡಿತ್ತು.
ಫೆಬ್ರವರಿ 5ರಂದು ದಿಲ್ಲಿ ಹೈಕೋರ್ಟ್ ಗಲ್ಲುಶಿಕ್ಷೆ ದೃಢಪಡಿಸಿತ್ತು ಆದರೆ, ಒಂದು ವಾರಗಳ ಒಳಗೆ ಕಾನೂನು ಪರಿಹಾರಗಳನ್ನು ಪೂರೈಸುವಂತೆ ಆರೋಪಿಗಳಿಗೆ ಸೂಚಿಸಿತ್ತು.







