ರಾಜ್ಯಪಾಲರ ಹಿಂದಿ ಭಾಷಣಕ್ಕೆ ಜೆಡಿಎಸ್ ಸದಸ್ಯ ಅನ್ನದಾನಿ ಆಕ್ಷೇಪ

ಬೆಂಗಳೂರು, ಫೆ. 17: ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಮಾಡಿದ ಹಿಂದಿ ಭಾಷಣಕ್ಕೆ ಜೆಡಿಎಸ್ ಸದಸ್ಯ ಡಾ.ಕೆ.ಅನ್ನದಾನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ 11:05ರ ಸುಮಾರಿಗೆ ರಾಷ್ಟ್ರಗೀತೆಯೊಂದಿಗೆ ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆಯೇ ಮಧ್ಯದಲ್ಲೆ ಎದ್ದು ನಿಂತ ಅನ್ನದಾನಿ, ‘ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದಾರೆ. ನಮಗೆ ರಾಜ್ಯಪಾಲರ ಭಾಷಣದ ಕನ್ನಡ ಹಾಗೂ ಇಂಗ್ಲಿಷ್ ಪ್ರತಿ ನೀಡಲಾಗಿದೆ. ಇದು ಏಕೆ ಹೀಗೆ?’ ಎಂದು ಪ್ರಶ್ನಿಸಿದರು.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ಗಮನವನ್ನು ಜೆಡಿಎಸ್ ಸದಸ್ಯ ಅನ್ನದಾನಿ ಸೆಳೆದರು. ಆದರೆ, ಅನ್ನದಾನಿ ಆಕ್ಷೇಪಕ್ಕೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವೊಬ್ಬ ಸದಸ್ಯರೂ ಧ್ವನಿಗೂಡಿಸಲಿಲ್ಲ. ರಾಜ್ಯಪಾಲ ವಜುಭಾಯಿ ವಾಲಾ ಅವರು ಹಿಂದಿಯಲ್ಲೆ ತಮ್ಮ ಭಾಷಣ ಪೂರ್ಣಗೊಳಿಸಿದರು.
ಮಧ್ಯೆದಲ್ಲೆ ಬೆಲ್ ಸದ್ದು: ರಾಜ್ಯಪಾಲ ವಜುಭಾಯಿ ವಾಲಾ ಅವರ ಭಾಷಣದ ಮಧ್ಯೆದಲ್ಲೆ ವಿಧಾನಸಭೆ ಮೊಗಸಾಲೆಯಿಂದ ಕ್ಷಣಕಾಲ ‘ಬೆಲ್’ ಭಾರಿಸಿದ ಸದ್ದು ಕೇಳಿಸಿತು. ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಏನಾಯಿತು ಎಂದು ಯೋಚಿಸುವ ವೇಳೆ ಬೆಲ್ ಸದ್ದು ನಿಂತಿತ್ತು.







