ಮೀಸಲಾತಿ ರದ್ದು ಮಾಡುವುದು ಆರೆಸ್ಸೆಸ್, ಬಿಜೆಪಿ ಹಿಡನ್ ಅಜೆಂಡಾ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆ. 17: ಆರೆಸ್ಸೆಸ್ ಹಾಗೂ ಬಿಜೆಪಿ ಸಂವಿಧಾನ ಹಾಗೂ ಮೀಸಲಾತಿ ವಿರೋಧಿಗಳಾಗಿದ್ದು, ಹೇಗಾದರೂ ಮಾಡಿ ಮೀಸಲಾತಿಯನ್ನು ತೆಗೆಯಬೇಕು ಎಂಬುದು ಅವರ ಹಿಡನ್ ಅಜೆಂಡಾ. ಇದನ್ನು ಎಲ್ಲ ವರ್ಗದ ಜನರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ನಗರದ ಪುರಭವನದ ಎದುರು ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ‘ಮೀಸಲಾತಿ ಮೂಲಭೂತ ಹಕ್ಕಲ್ಲ’ ಎಂಬ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಅಡಿಯಲ್ಲಿ ಮೀಸಲಾತಿಯನ್ನು ಸೇರಿಸಲಾಗಿದೆ. ಎಲ್ಲರಿಗೂ ಸಮರ್ಪಕ ಪ್ರಾತಿನಿದ್ಯ ನೀಡಬೇಕು ಎಂದು ಹೇಳುತ್ತದೆ ಸಂವಿಧಾನ. ಆದರೆ, ಸುಪ್ರೀಂಕೋರ್ಟ್ ಏಕಾಏಕಿ ಮೂಲಭೂತ ಹಕ್ಕಲ್ಲ. ನಾವು ಮೀಸಲಾತಿ ನೀಡಿ ಎಂದು ಹೇಳುವ ಹಕ್ಕಿಲ್ಲ ಎಂದು, ಎಲ್ಲ ಅಧಿಕಾರ ರಾಜ್ಯದ ವಿವೇಚನೆ ಬಿಟ್ಟಿರುವುದು ಸರಿಯಲ್ಲ. ಇದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದರು.
ಸುಪ್ರೀಂಕೋರ್ಟ್‌ನಲ್ಲಿ ಸರಕಾರದ ಪರ ವಕೀಲರು ಸರಿಯಾಗಿ ವಾದ ಮಂಡನೆ ಮಾಡದೇ ಇರುವುದರಿಂದ ಇಂತಹ ತೀರ್ಪು ಬಂದಿದೆ. ಸುಪ್ರೀಂಕೋರ್ಟ್ ಅವರ ವ್ಯಾಪ್ತಿಯನ್ನು ಮೀರಿ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ತೀರ್ಪು ನೀಡಿದೆ. ಆದರೆ, ಈ ತೀರ್ಪು ಹೊರಬಿದ್ದು 10 ದಿನಗಳು ಕಳೆಯುತ್ತಿದ್ದರೂ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಶಾ ಸೇರಿದಂತೆ ಯಾರೂ ಈ ಕುರಿತು ಮಾತನಾಡುತ್ತಿಲ್ಲ ಯಾಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಆರೆಸ್ಸೆಸ್, ಬಿಜೆಪಿಯು ಸಂವಿಧಾನವನ್ನು ನಾಶ ಮಾಡಿ, ಮನುಸ್ಮತಿ ಸಂವಿಧಾನ ಜಾರಿಗೆ ಹಾತೊರೆಯುತ್ತಿದೆ. ಆರೆಸ್ಸೆಸ್‌ನ ಸಂಚಾಲಕ ಮೀಸಲಾತಿ ನೀಡಬೇಕಾ-ಬೇಡವಾ ಎಂಬುದನ್ನು ಪರಿಶೀಲಿಸಬೇಕು ಎನ್ನುತ್ತಾರೆ. ಮತ್ತೊಂದು ಕಡೆ ಬಿಜೆಪಿ ನಾಯಕರು ಮೀಸಲಾತಿ ವಿರುದ್ಧ, ಸಂವಿಧಾನವನ್ನು ಬದಲಾವಣೆ ಮಾಡುವ ಮಾತುಗಳನ್ನಾಡುತ್ತಾರೆ. ಎಲ್ಲರ ಎದುರು ಸಾಮಾಜಿಕ ನ್ಯಾಯದ ಪರ ಇದ್ದೇವೆ ಎಂದೂ ತೋರಿಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.
ಸಮಾಜದಲ್ಲಿ ಸಮಾನತೆ ಇರಬಾರದು, ಮೀಸಲಾತಿ ಸಿಗಬಾರದು, ಶೋಷಣೆಗೆ ಒಳಗಾದವರು ಮೇಲೆ ಬರಬಾರದು ಎಂಬುದು ಬಿಜೆಪಿ ಆಶಯವಾಗಿದೆ. ಅದರ ಭಾಗವಾಗಿ ಸಂಸದ ತೇಜಸ್ವಿ ಸೂರ್ಯ, ಪ್ರತಾಪಸಿಂಹ, ಅನಂತ್ ಕುಮಾರ್ ಹೆಗಡೆ ಸೇರಿದಂತೆ ಹಲವರು ಸಂವಿಧಾನದ ವಿರುದ್ಧವಾಗಿ ಮಾತನಾಡಿದರೂ ಏನೂ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಪಕ್ಷ ಮುಂದೆ ಸಾಮಾಜಿಕ ನ್ಯಾಯದ ಪರ, ಸಂವಿಧಾನ ವಿರೋಧಿ ಧೋರಣೆಗಳ ವಿರುದ್ಧ ಹೋರಾಟ ಮಾಡಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸಂವಿಧಾನದ ಆಶಯಗಳಿಗೆ ಕೊಡಲಿ ಬಿಟ್ಟು ಬೀಳುತ್ತದೆ. ಸಂವಿಧಾನ ರಚನೆಯಾಗುವ ವೇಳೆಯಲ್ಲಿ ಅಂಬೇಡ್ಕರ್ ಸೇರಿದಂತೆ ಅನೇಕರು ಮೀಸಲಾತಿ ವಿಷಯದ ಕುರಿತು ಸಾಕಷ್ಟು ಚರ್ಚೆ ನಡೆಸಿ, ಅನಂತರ ಅದನ್ನು ಅಳವಡಿಸಲಾಗಿದೆ. ಆದರೆ, ಏಕಾಏಕಿ ಸುಪ್ರೀಂಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಹೇಳಿರುವುದು ಸಲ್ಲ ಎಂದು ಹೇಳಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರಕ್ಕೆ ಹಾಗೂ ಪಕ್ಷಕ್ಕೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ ಕುರಿತು ಕಳಕಳಿಯಿಲ್ಲ. ಕೇವಲ ತೋರಿಕೆಯ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಸಮುದಾಯಗಳ ಕುರಿತು ಬದ್ಧತೆಯಿದ್ದಲ್ಲಿ, ಕೂಡಲೇ ಕೇಂದ್ರದಲ್ಲಿ ಸರ್ವಪಕ್ಷಗಳ ನಿಯೋಗವನ್ನು ಕರೆದು, ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಶಾಸನ ಮಂಡಿಸಲಿ. ಇದಲ್ಲದೆ, ಸಂವಿಧಾನಕ್ಕೆ ತಿದ್ದುಪಡಿ ತರಲಿ ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಉಗ್ರಪ್ಪ ಸೇರಿದಂತೆ ಮತ್ತಿತರರಿದ್ದರು.
ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರಕಾರ ಸುಗ್ರೀವಾಜ್ಞೆ ಮಂಡಿಸಬೇಕು. ಇಲ್ಲದಿದ್ದರೆ, ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಮೀಸಲಾತಿಯನ್ನು ಕಡ್ಡಾಯಗೊಳಿಸಬೇಕು. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, 9 ಜನರಿರುವ ಸಾಂವಿಧಾನಿಕ ನ್ಯಾಯಪೀಠ ರಚನೆ ಮಾಡಲು ಒತ್ತಡ ಹೇರಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.







