ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಯಾರೂ ಇಲ್ಲ ಕಾಪಾಡಿ: ವುಹಾನ್ ನಗರದಿಂದ ಸರಕಾರಕ್ಕೆ ಭಾರತೀಯ ದಂಪತಿಯ ಮೊರೆ
ವುಹಾನ್ (ಚೀನಾ), ಫೆ. 17: ಕೊರೋನವೈರಸ್ ಸೋಂಕಿನ ಕೇಂದ್ರಬಿಂದುವಾಗಿರುವ ಚೀನಾದ ವುಹಾನ್ ನಗರದಲ್ಲಿ ಸಿಕ್ಕಿಹಾಕಿಕೊಂಡಿರುವ ಉತ್ತರಪ್ರದೇಶದ ದಂಪತಿಯೊಂದು, ತಾವು ಭಾರತಕ್ಕೆ ಮರಳಲು ಏರ್ಪಾಡುಗಳನ್ನು ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.
ವುಹಾನ್ ಟೆಕ್ಸ್‌ಟೈಲ್ ವಿಶ್ವವಿದ್ಯಾನಿಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಆಶಿಶ್ ಯಾದವ್ ಮತ್ತು ಪಿಎಚ್‌ಡಿ ಸ್ಕಾಲರ್ ಆಗಿರುವ ಅವರ ಪತ್ನಿ ನೇಹಾಗೆ ಈ ತಿಂಗಳ ಆದಿ ಭಾಗದಲ್ಲಿ ಕೇಂದ್ರ ಸರಕಾರ ಕಳುಹಿಸಿದ ವಿಮಾನಗಳಲ್ಲಿ ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಆಗ ನೇಹಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ದಂಪತಿ ತಮ್ಮ ಅಪಾರ್ಟ್ ಮೆಂಟ್ ನಿಂದ ವೀಡಿಯೊಗಳನ್ನು ಕಳುಹಿಸಿದ್ದು, ತಮ್ಮ ಹತಾಶೆಯನ್ನು ತೋಡಿಕೊಂಡಿದ್ದಾರೆ ಹಾಗೂ ಸಹಾಯಕ್ಕಾಗಿ ಮನವಿಗಳನ್ನು ಮಾಡಿದ್ದಾರೆ.
‘‘ನಮಸ್ತೆ, ನನ್ನ ಹೆಸರು ಆಶಿಶ್ ಯಾದವ್ ಮತ್ತು ಇದು ನನ್ನ ಪತ್ನಿ ನೇಹಾ ಯಾದವ್. ನಾನು ವುಹಾನ್ ಟೆಕ್ಸ್‌ಟೈಲ್ ವಿಶ್ವವಿದ್ಯಾನಿಲಯದಲ್ಲಿ ಅಸೋಸಿಯೀಟ್ ಪ್ರೊಫೆಸರ್ ಆಗಿದ್ದೇನೆ. ನಮ್ಮನ್ನು ಇಲ್ಲಿಂದ ಸಾಧ್ಯವಾದಷ್ಟು ಬೇಗ ತೆರವುಗೊಳಿಸಬೇಕೆಂದು ನಾನು ಪ್ರಧಾನಿಗೆ ಮನವಿ ಸಲ್ಲಿಸುತ್ತೇನೆ’’ ಎಂದು ಎನ್ ಡಿಟಿವಿಯೊಂದಿಗೆ ಹಂಚಿಕೊಂಡಿರುವ ವೀಡಿಯೊ ತುಣುಕೊಂದರಲ್ಲಿ ಆಶಿಶ್ ಹೇಳಿದ್ದಾರೆ.
‘‘ಇಲ್ಲಿನ ಹವಾಮಾನ ಇಂದು ತೀರಾ ಕೆಟ್ಟದಾಗಿದೆ. ನಿನ್ನೆ ಮಧ್ಯಾಹ್ನದಿಂದ ಭಾರೀ ಮಳೆ ಬೀಳುತ್ತಿದೆ ಮತ್ತು ಲಘು ಹಿಮಪಾತವಾಗುತ್ತಿದೆ. ನಮ್ಮ ಕಟ್ಟಡದಲ್ಲಿ ಯಾರೂ ಇಲ್ಲ. ನಿನ್ನೆ ನಮಗೆ ನೀರೇ ಸಿಗಲಿಲ್ಲ. ನೀರು ಕಳುಹಿಸುವಂತೆ ನಿನ್ನೆ ನಾನು ಮನವಿ ಮಾಡಿದ್ದೆ. ಇಂದು ಇಲ್ಲಿನ ಅಧಿಕಾರಿಗಳು ನಮಗೆ ಸ್ವಲ್ಪ ನೀರು ಮತ್ತು ಈ ಆಹಾರವನ್ನು ಕಳುಹಿಸಿದ್ದಾರೆ. ನಮಗೆ ಕೆಲವೇ ದಿನಗಳಿಗಾಗುವಷ್ಟು ಮಾತ್ರ ಆಹಾರ ಧಾನ್ಯಗಳಿವೆ. ಹಾಗಾಗಿ, ನಮ್ಮನ್ನು ಸಾಧ್ಯವಾದಷ್ಟು ಬೇಗ ತೆರವುಗೊಳಿಸುವಂತೆ ನಾನು ಮತ್ತೊಮ್ಮೆ ಭಾರತ ಸರಕಾರಕ್ಕೆ ಮನವಿ ಮಾಡುತ್ತೇನೆ’’ ಎಂದು ರವಿವಾರ ಮಾಡಲಾದ ವೀಡಿಯೊದಲ್ಲಿ ಆಶಿಶ್ ಹೇಳುತ್ತಾರೆ.







