ಬೆಂಗಳೂರು: ಪಿಎನ್ ಬಿ ಬ್ಯಾಂಕ್ ಸಿಬ್ಬಂದಿಯಿಂದಲೇ ಕೋಟ್ಯಂತರ ರೂ. ವಂಚನೆ

ಬೆಂಗಳೂರು, ಫೆ.17: ಹರಾಜಿನ ಮೂಲಕ ಮಾರಾಟ ಮಾಡಿದ್ದ ಸೊತ್ತನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬ್ಬಂದಿ ಮತ್ತೊಬ್ಬರಿಗೆ ಮಾರಾಟ ಮಾಡಿ 2.25 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರಹಳ್ಳಿ ಮುಖ್ಯರಸ್ತೆಯ ಚಿಕ್ಕಲಸಂದ್ರ ನಿವಾಸಿ ಬಾಲಕೃಷ್ಣ ಎಂಬವರು ವಂಚನೆಗೊಳಗಾದವರು ಎನ್ನಲಾಗಿದೆ.
ಬಾಲಕೃಷ್ಣ ಅವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಮೋದಿ, ರಹೇಜಾ ಟವರ್ ಶಾಖೆಯ ವ್ಯವಸ್ಥಾಪಕ ಮುರುಳಿ, ಮಿರ್ಚಿ ವಿಕ್ಟರ್, ಮನೋಹರ್ ಹಾಗೂ ರವಿಕುಮಾರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಹನುಮಂತನಗರ ಠಾಣಾ ಪೊಲೀಸರು ಹೇಳಿದ್ದಾರೆ.
ಏನಿದು ಪ್ರಕರಣ?: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನವರು ಎಂ.ಜಿ.ರಸ್ತೆಯಲ್ಲಿರುವ ರಹೇಜಾ ಟವರ್ ಕಟ್ಟಡದ 26 ಮತ್ತು 27 ಸಂಖ್ಯೆಯಲ್ಲಿರುವ ಸೊತ್ತನ್ನು ಸಾರ್ವಜನಿಕ ಬಹಿರಂಗ ಹರಾಜು ಹಾಕುತ್ತಿದ್ದರು. ಈ ವಿಚಾರ ತಿಳಿದ ಬಾಲಕೃಷ್ಣ ಅವರು ಕಳೆದ ವರ್ಷ ಮೇ 20 ರಂದು ಆನ್‌ಲೈನ್ ಮೂಲಕ 2.25 ಕೋಟಿಗೆ ಇ-ಹರಾಜು ಕೂಗಿದ್ದರು. ಈ ಪೈಕಿ ಸೊತ್ತಿಗೆ ಗೊತ್ತುಪಡಿಸಿದ ಹಣದ ಪೈಕಿ 50 ಲಕ್ಷ ರೂ.ಹಣವನ್ನು ಆರ್‌ಟಿಜಿಎಸ್ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಜಮೆ ಮಾಡಿದ್ದರು. ಬಳಿಕ 1.50 ಕೋಟಿ ರೂ.ಹಣವನ್ನು ಫೆ.3ರಂದು ಜಮೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರು ಹಾಗೂ ಇತರೆ ಆರೋಪಿಗಳು ದೂರುದಾರರಿಗೆ ಸೇಲ್ ಸರ್ಟಿಫಿಕೇಟ್ ನೀಡಿದ್ದರು ಎನ್ನಲಾಗಿದೆ.
ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೊತ್ತನ್ನು ನೋಂದಾಯಿಸಿಕೊಳ್ಳುವ ಸಲುವಾಗಿ ವಿಚಾರಣೆ ಮಾಡಲು ಬಾಲಕೃಷ್ಣ ಅವರು ತೆರಳಿದ್ದರು. ಈ ವೇಳೆ ಬಸವನಗುಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈಗಾಗಲೇ ಬ್ಯಾಂಕ್‌ಗೆ ಸಂಬಂಧಪಟ್ಟ ಮನೋಹರ್ ಎಂಬ ವ್ಯಕ್ತಿಯು ರವಿಕುಮಾರ್ ಎಂಬ ವ್ಯಕ್ತಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದರು. ಬ್ಯಾಂಕ್ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ನನಗೆ ವಂಚನೆ ಮಾಡುವ ಉದ್ದೇಶದಿಂದ ನಕಲಿ ಸರ್ಟಿಫಿಕೇಟ್ ನೀಡಿ ಎರಡು ಕೋಟಿ ಹಣ ಲಪಟಾಯಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







