ವಿಧಾನಸಭೆ ಕಲಾಪಕ್ಕೆ ಮಾಧ್ಯಮ ನಿರ್ಬಂಧ ಸರಿಯಲ್ಲ: ಸಿದ್ದರಾಮಯ್ಯ ಆಕ್ಷೇಪ

ಬೆಂಗಳೂರು, ಫೆ.17: ವಿಧಾನಸಭೆ ಕಲಾಪ ನಡೆಯುವ ಸಂದರ್ಭದಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸಿರುವ ಕ್ರಮ ಸರಿಯಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ಪುರಭವನದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಶಾಸಕರ ತಪ್ಪುಗಳು ಹೊರಬಂದಿದ್ದವು. ಅದರಿಂದಾಗಿ, ಅಂತಹುದು ಮತ್ತೊಂದು ಬಾರಿ ನಡೆಯದಂತೆ ಮಾಧ್ಯಮಗಳನ್ನೇ ನಿರ್ಬಂಧಿಸಿರುವುದು ಸರಿಯಲ್ಲ ಎಂದು ಹೇಳಿದರು.
ಸದನದಲ್ಲಿ ಜನರ ಸಮಸ್ಯೆಗಳು ಚರ್ಚೆಯಾಗುತ್ತವೆ. ಅದನ್ನು ಜನರಿಗೆ ಮಾಧ್ಯಮಗಳು ನೇರವಾಗಿ ತೋರಿಸುವ ಕೆಲಸ ಮಾಡುತ್ತವೆ. ಆದರೆ, ಬಿಜೆಪಿಯು ಜನ ವಿರೋಧಿ ಕೆಲಸಗಳಿಂದ ತಪ್ಪಿಸಿಕೊಳ್ಳಲು, ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮ ನಿರ್ಬಂಧ ಸಲ್ಲ ಎಂದು ಸಿದ್ದರಾಮಯ್ಯ ನುಡಿದರು.
ಈಗಿನ ಸರಕಾರ ಯಾವುದೇ ಒಂದು ಹೊಸ ಯೋಜನೆಯನ್ನು ಘೋಷಣೆ ಮಾಡಿಲ್ಲ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಯೋಜನೆಗಳು ಹಾಗೂ ಸಮ್ಮಿಶ್ರ ಸರಕಾರದಲ್ಲಿ ಮಾಡಿದ ಯೋಜನೆಗಳಿಗೆ ನಮ್ಮದು ಎಂದು ಹೇಳಿಕೊಂಡು ಮುಂದುವರಿಯುತ್ತಿವೆ ಎಂದು ಅವರು ಲೇವಡಿ ಮಾಡಿದರು.
ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿರುವುದರ ಸಂಬಂಧ ರಾಜ್ಯಪಾಲರ ಭಾಷಣದ ವೇಳೆ ಸೂಕ್ಷ್ಮವಾಗಿ ಮಾತನಾಡಿದ್ದೇನೆ. ಈ ಕುರಿತು ಬಜೆಟ್ ಅಧಿವೇಶನದಲ್ಲಿ ಸುದೀರ್ಘವಾಗಿ ಮಾತನಾಡುತ್ತೇನೆ. ಇನ್ನು ಅರಣ್ಯವನ್ನೇ ಕಿತ್ತುತಿಂದವರ ಕೈಗೆ ಅರಣ್ಯ ಸಚಿವ ಖಾತೆ ನೀಡಿದ್ದಾರೆ. ಅದರ ಪರಿಣಾಮ ಏನಾಗುತ್ತದೆ ಎಂದು ಮುಂದೆ ಬಿಜೆಪಿ ನಾಯಕರೇ ನೋಡುತ್ತಾರೆ ಎಂದು ಹೇಳಿದರು.







