‘ನೀನೊಂದು ಗಝಲ್’ ಕೃತಿ ಬಿಡುಗಡೆ

ಮಂಗಳೂರು, ಫೆ.17: ವಿದ್ಯಾ ಪ್ರಕಾಶನ ಮತ್ತು ಅರೆಹೊಳೆ ಪ್ರತಿಷ್ಠಾನಗಳ ಆಶ್ರಯದಲ್ಲಿ ನಗರದ ಬೋಂದೆಲ್‌ನ ಮುಳಿಯಾಂಗಣದಲ್ಲಿ ರಘು ಇಡ್ಕಿದು ಅವರ ‘ನೀನೊಂದು ಗಝಲ್’ ಕೃತಿಯನ್ನು ಬ್ರಹ್ಮಶ್ರೀ ನಾರಾಯಣ ಗುರು ಪೀಠದ ನಿರ್ದೇಶಕ, ಹಿರಿಯ ಸಾಹಿತಿ ಮುದ್ದು ಮೂಡು ಬೆಳ್ಳೆ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಅಂತಃಸತ್ವವಿದೆ. ನಿರ್ದಿಷ್ಟವಾದ ಕೆಲವು ಸಾಹಿತ್ಯ ಪ್ರಕಾರಗಳು ಆಯಾ ಭಾಷೆಯ ಅಂತಃಸತ್ವವನ್ನು ಸಾರುವ ಗಟ್ಟಿ ಪ್ರಕಾರಗಳಾಗಿವೆ. ಗಝಲ್ ಸಾಹಿತ್ಯವು ಪಾರ್ಸಿ, ಅರಬ್ ಮೂಲಗಳಿಂದ ಬಂದು ಉರ್ದು ಭಾಷೆ ಯಲ್ಲಿ ಗಟ್ಟಿಯಾಗಿ ನೆಲೆ ನಿಂತವು. ಆ ನಂತರದಲ್ಲಿ ಭಾರತೀಯ ಇತರ ಭಾಷೆಗಳಿಗೂ ವ್ಯಾಪಸಿದವು ಎಂದರು.
ಗಝಲ್‌ಗಳು ಕಾವ್ಯದ ಹೊಸ ಪ್ರಕಾರವಾಗಿ ಇತರ ಭಾಷೆಗಳಲ್ಲಿ ಬೆಳೆಯುತ್ತಿರುವುದು ಸಂತಸದಾಯಕ. ರಘು ಇಡ್ಕಿದು ಅವರು ತುಳು ಮತ್ತು ಕನ್ನಡ ಭಾಷೆಗಳಲ್ಲಿ ಉತ್ತಮ ಗಝಲ್ ಕೃತಿಗಳನ್ನು ಪ್ರಕಟಿಸಿ ಗಮನ ಸೆಳೆದಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಂತೋಷಕುಮಾರ್ ಬೆಂಗಳೂರು, ಹುಸೈನ್ ಕಾಟಿಪಳ್ಳ, ಪ್ರೊ.ಪಿ.ಕೃಷ್ಣಮೂರ್ತಿ, ಅರೆಹೊಳೆ ಸದಾಶಿವರಾವ್ ಉಪಸ್ಥಿತರಿದ್ದರು.
ಗಝಲ್ ಕವಿಗೋಷ್ಠಿಯಲ್ಲಿ ಡಾ.ಜ್ಯೋತಿ ಚೇಳ್ಯಾರು, ಡಾ.ಸುರೇಶ್ ನೆಗಳಗುಳಿ, ಅಶೋಕ ಎನ್., ಕಡೇಶಿವಾಲಯ, ವಿಶ್ವನಾಥ ಕುಲಾಲ್ ಮಿತ್ತೂರು, ರೇಮಂಡ್ ಡಿಕುನ್ಹ, ವಿಜಯಲಕ್ಷ್ಮೀ ಕಟೀಲು, ಗಣೇಶ್ ಆದ್ಯಪಾಡಿ, ಚೇತನಾ ಕುಂಬ್ಳೆ ಪಾಲ್ಗೊಂಡು ಗಝಲ್‌ಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಆತ್ಮಿ ಯು.ವಿ. ಪ್ರಾರ್ಥಿಸಿದರು. ವಿನಮ್ರ ಇಡ್ಕಿದು ಗಝಲ್ ಕೃತಿಯ ಗಝಲ್‌ನ್ನು ಪ್ರಸ್ತುತಪಡಿಸಿದರು. ವಿದ್ಯಾ ಯು. ಮತ್ತು ಡೊಂಬಯ್ಯ ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು. ಡಾ.ವೈಶಾಲಿ ಯು. ವಂದಿಸಿದರು.







