ವಿಧಾನಪರಿಷತ್ ಚುನಾವಣೆ: ಡಿಸಿಎಂ ಲಕ್ಷ್ಮಣ ಸವದಿಗೆ ಗೆಲುವು

ಬೆಂಗಳೂರು, ಫೆ.17: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್ ಅವರಿಂದ ತೆರವಾಗಿದ್ದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಕ್ಷ್ಮಣ ಸವದಿ ಗೆಲುವು ಸಾಧಿಸಿದ್ದಾರೆ.
ಲಕ್ಷ್ಮಣ ಸವದಿ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಬೆಂಬಲಿತ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಕಣದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಘೋಷಿಸಿದ್ದರು. ಇದರಿಂದಾಗಿ, ಲಕ್ಷ್ಮಣ ಸವದಿ ಗೆಲುವಿನ ಹಾದಿ ಸುಗಮವಾಯಿತು.
ಸೋಮವಾರ ನಡೆದ ಮತದಾನದ ಪ್ರಕ್ರಿಯೆಯಲ್ಲಿ 120 ಶಾಸಕರು ತಮ್ಮ ಹಕ್ಕು ಚಲಾಯಿಸಿದರು. ಈ ಪೈಕಿ 7 ಮತಗಳು ಅಸಿಂಧುವಾಗಿದ್ದು, 113 ಮತಗಳನ್ನು ಪಡೆಯುವ ಮೂಲಕ ಲಕ್ಷ್ಮಣ ಸವದಿ, ವಿಧಾನಪರಿಷತ್ ಪ್ರವೇಶ ಮಾಡಿದ್ದಾರೆ.
ಎಲ್ಲರಿಗೂ ಧನ್ಯವಾದಗಳು: ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಇಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿರುವ ಸರ್ವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನನಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಎಲ್ಲ ಪ್ರಮುಖರಿಗೆ ಮತ್ತು ಕಾರ್ಯಕರ್ತರಿಗೆ ವಂದನೆಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಮತ್ತು ಸಚಿವರು, ಕೆಲವು ಪಕ್ಷೇತರ ಶಾಸಕರು, ಮತ್ತಿತರ ಪಕ್ಷಗಳ ಶಾಸಕರು ನನ್ನ ಪರವಾಗಿ ಮತ ಚಲಾಯಿಸಿದ್ದು, ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಅಷ್ಟೇ ಅಲ್ಲ, ಈ ಚುನಾವಣಾ ಪ್ರಕ್ರಿಯೆಗೆ ಎಲ್ಲ ಪಕ್ಷಗಳು ಮತ್ತು ಅಧಿಕಾರಿ ವರ್ಗದವರು, ಮಾಧ್ಯಮದ ಸ್ನೇಹಿತರು ನೀಡಿರುವ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಈ ಗೆಲುವು ನನಗೆ ಸರಕಾರದಲ್ಲಿ ಮತ್ತು ಬಿಜೆಪಿಯಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಹೊಸ ಶಕ್ತಿಯನ್ನು ತಂದುಕೊಟ್ಟಿದೆ. ಮುಂದೆಯೂ ನಾನು ಸದಾ ಸಾರ್ವಜನಿಕರ ಹಿತಾಸಕ್ತಿಗೆ ಸ್ಪಂದಿಸುತ್ತಾ ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.







