ಎಸೆಸೆಲ್ಸಿ ವಿದ್ಯಾರ್ಥಿಗಳ ಗೊಂದಲಗಳ ಪರಿಹಾರಕ್ಕೆ ವಿಡಿಯೋ ಬಿಡುಗಡೆ

ಬೆಂಗಳೂರು, ಫೆ. 17: ಎಸೆಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕಾಡುವ ಗೊಂದಲಗಳನ್ನು ಪರಿಹರಿಸುವ ದೃಷ್ಟಿಯಿಂದ ಶಿಕ್ಷಣ ಇಲಾಖೆ ಹೊಸ ಕ್ರಮಕ್ಕೆ ಮುಂದಾಗಿದ್ದು, ಹಲವಾರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಒಂದು ವಿಡಿಯೋವನ್ನು ಜಾಲತಾಣದಲ್ಲಿ ಬಿಡುಗಡೆ ಮಾಡಿದೆ.
ಎಸೆಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇನ್ನು ಕೆಲವು ವಾರಗಳಷ್ಟೇ ಬಾಕಿಯಿದೆ. ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಅವರ ಪೋಷಕರನ್ನು ಸಾಮಾನ್ಯವಾಗಿ ಕಾಡುವ ಗೊಂದಲಗಳನ್ನು ಪರಿಹರಿಸಲು ಶಿಕ್ಷಣ ಇಲಾಖೆ ಪ್ರಯತ್ನಿಸಿದೆ. ಅದರ ಭಾಗವಾಗಿ ಸಾಮಾನ್ಯವಾಗಿ ಉದ್ಭವವಾಗುವ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಂಡು ಪ್ರೌಢ ಶಿಕ್ಷಣ ಮಂಡಳಿ ಅದಕ್ಕೆ ವಿಡಿಯೋ ಮುಖಾಂತರ ಉತ್ತರ ನೀಡಿ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯದ ಮೂಲೆ ಮೂಲೆಗೂ ಇದರ ಲಾಭ ತಲುಪುವಂತಾಗಬೇಕು ಎಂಬುದು ಈ ವಿಡಿಯೋ ಉದ್ದೇಶವಾಗಿದೆ. ವಿದ್ಯಾರ್ಥಿಗಳಲ್ಲಿನ ಭಯ, ಆತಂಕ ದೂರವಾಗಿ, ಸಮಾಧಾನದಿಂದ ಪರೀಕ್ಷೆ ಬರೆಯುವಂತಾಗಬೇಕು. ಈ ವಿಡಿಯೋ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವುದರಿಂದ ಸ್ವಲ್ಪ ದೀರ್ಘವಾಗಿದೆ. ಇದನ್ನು ಸಚಿವರ ಪೇಸ್‌ಬುಕ್ ಖಾತೆಯಲ್ಲಿಯೂ ನೋಡಬಹುದಾಗಿದ್ದು, ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿಯೂ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಸಾರಿಗೆ ಸಚಿವರಿಗೆ ಪತ್ರ: ಮಾರ್ಚ್/ಎಪ್ರಿಲ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಕಲ್ಪಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿ ಸಾರಿಗೆ ಚಿವರಿಗೆ ಪತ್ರ ಬರೆದಿದ್ದಾರೆ.
ಪ್ರತಿದಿನ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪಡೆದುಕೊಂಡಿರುವ ಬಸ್‌ಪಾಸ್‌ಗಳಲ್ಲಿ ನಿಗದಿತ ಮಾರ್ಗದಲ್ಲಿ ಅಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗಿರುತ್ತದೆ. ಆದರೆ, ಪರೀಕ್ಷಾ ಕೇಂದ್ರಗಳು ಅದಲು-ಬದಲು ಆಗಿರುವ ಸಾಧ್ಯತೆಯಿರುವುದರಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕೇವಲ ಗುರುತಿನ ಚೀಟಿ ತೋರಿಸಿ ಪ್ರಯಾಣಿಲು ಅವಕಾಶ ನೀಡಬೇಕು ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಹೇಳಿದ್ದಾರೆ.







