2021ರ ಜೂನಿಯರ್ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ

ಲೌಸಾನ್, ಫೆ.17: ಮುಂದಿನ ವರ್ಷ ನಡೆಯಲಿರುವ ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯವಹಿಸಿಕೊಳ್ಳಲಿದೆ ಎಂದು ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್)ಸೋಮವಾರ ಘೋಷಿಸಿದೆ.
ಭಾರತ ಎರಡನೇ ಬಾರಿ ಪ್ರತಿಷ್ಠಿತ ಟೂರ್ನಮೆಂಟ್‌ನ ಆತಿಥ್ಯವಹಿಸುವ ಅವಕಾಶ ಗಿಟ್ಟಿಸಿಕೊಂಡಿದೆ. 2016ರಲ್ಲಿ ಮೊದಲ ಬಾರಿ ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ವಿಶ್ವಕಪ್ ಆಯೋಜಿಸಿತ್ತು. ಆಗ ಆತಿಥೇಯ ಭಾರತ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯು 2021ರ ಅಂತ್ಯಕ್ಕೆ ನಡೆಯಲಿದೆ. ಆದರೆ, ಟೂರ್ನಮೆಂಟ್ ನಡೆಯುವ ಸ್ಥಳ ಹಾಗೂ ದಿನಾಂಕವನ್ನು ಬಳಿಕ ಪ್ರಕಟಿಸಲಾಗುವುದು ಎಂದು ಎಫ್‌ಐಎಚ್ ತಿಳಿಸಿದೆ. ಜೂನಿಯರ್ ಪುರುಷರ ವಿಶ್ವಕಪ್ ಪ್ರಶಸ್ತಿಗಾಗಿ 16 ತಂಡಗಳು ಸ್ಪರ್ಧಿಸಲಿವೆ. ಈ ಪೈಕಿ ಯುರೋಪ್‌ನ ಆರು, ಏಶ್ಯ ಖಂಡದಿಂದ ಆತಿಥೇಯ ಭಾರತ ಸಹಿತ 4, ಆಫ್ರಿಕಾದ ಎರಡು, ಒಶಿಯಾನಿಯದ ಎರಡು ಹಾಗೂ ಪಾನ್ ಅಮೆರಿಕದ ಎರಡು ತಂಡಗಳು ಭಾಗವಹಿಸುತ್ತಿವೆ. 16 ತಂಡಗಳ ಪೈಕಿ ಯುರೋಪ್‌ನ ಆರು ತಂಡಗಳು ಜೂನಿಯರ್ ವಿಶ್ವಕಪ್‌ಗೆ ಈಗಾಗಲೇ ಅರ್ಹತೆ ಪಡೆದಿವೆ. ಜರ್ಮನಿ, ಇಂಗ್ಲೆಂಡ್, ನೆದರ್ಲೆಂಡ್, ಸ್ಪೇನ್, ಬೆಲ್ಜಿಯಂ ಹಾಗೂ ಫ್ರಾನ್ಸ್ 2019ರಲ್ಲಿ ನಡೆದ ಯುರೋಪಿಯನ್ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿವೆ. ಲಕ್ನೋದಲ್ಲಿ 2016ರ ಆವೃತ್ತಿಯ ವಿಶ್ವಕಪ್‌ನ ಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು 2-1 ಅಂತರದಿಂದ ಮಣಿಸಿದ ಭಾರತ ಎರಡನೇ ಬಾರಿ ಜೂನಿಯರ್ ವಿಶ್ವಕಪನ್ನು ಎತ್ತಿ ಹಿಡಿದಿತ್ತು. ಭಾರತ 2018ರಲ್ಲಿ ಭುವನೇಶ್ವರದಲ್ಲಿ ಸೀನಿಯರ್ ಪುರುಷರ ಹಾಕಿ ವಿಶ್ವಕಪ್‌ನ್ನು ಆಯೋಜಿಸಿತ್ತು.





