ಚೀನಾ: ಅಧ್ಯಕ್ಷರನ್ನು ಟೀಕಿಸಿದ ಹೋರಾಟಗಾರನ ಬಂಧನ

ಬೀಜಿಂಗ್, ಫೆ. 18: ಹಲವು ವಾರಗಳ ಕಾಲ ತಲೆಮರೆಸಿಕೊಂಡಿದ್ದ ಚೀನಾದ ಮಾನವಹಕ್ಕುಗಳ ಕಾರ್ಯಕರ್ತರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಮಂಗಳವಾರ ತಿಳಿಸಿದೆ. ಕೊರೋನವೈರಸ್ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿಗಾಗಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಟೀಕಿಸಿದ್ದರು.
ಡಿಸೆಂಬರ್‌ನಿಂದ ತಲೆಮರೆಸಿಕೊಂಡಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಕ್ಸು ಝಿಯೊಂಗ್‌ರನ್ನು ಶನಿವಾರ ಬಂಧಿಸಲಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ತಿಳಿಸಿದೆ.
ಜಿನ್‌ಪಿಂಗ್ 2012ರಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ನಾಗರಿಕ ಸ್ವಾತಂತ್ರಗಳನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದೆ ಹಾಗೂ ಮಾನವಹಕ್ಕುಗಳ ವಕೀಲರು, ಕಾರ್ಮಿಕ ಕಾರ್ಯಕರ್ತರು ಮತ್ತು ಮಾರ್ಕ್ಸ್‌ವಾದಿ ವಿದ್ಯಾರ್ಥಿಗಳನ್ನೂ ಬಂಧಿಸಿದೆ.
ಕೊರೋನವೈರಸ್ ಸೋಂಕು ಸ್ಫೋಟಗೊಳ್ಳುವ ಮುನ್ನ, ರಾಜಕೀಯ ಸುಧಾರಣೆ ಬಗ್ಗೆ ಚರ್ಚಿಸಲು ಫುಜಿಯನ್ ಪ್ರಾಂತದ ಕ್ಸಿಯಮೆನ್ ನಗರದಲ್ಲಿ ಡಿಸೆಂಬರ್‌ನಲ್ಲಿ ಏರ್ಪಡಿಸಲಾಗಿದ್ದ ಚಿಂತನಗೋಷ್ಠಿಯನ್ನು ಪೊಲೀಸರು ನಿಲ್ಲಿಸಿದ್ದರು. ಆ ಬಳಿಕ ಕ್ಸು ಝಿಯೊಂಗ್ ಭೂಗತರಾಗಿದ್ದರು.







