ಅಮೆರಿಕಾ’ಸ್ ಗಾಟ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಮುಂಬೈ ಡ್ಯಾನ್ಸ್ ತಂಡ
ಫೋಟೊ ಕೃಪೆ: twitter(AGT)
ಮುಂಬೈ, ಫೆ.18: ಅಮೆರಿಕಾ’ಸ್ ಗಾಟ್ ಟ್ಯಾಲೆಂಟ್ ಎಂಬ ಅಂತರಾಷ್ಟ್ರೀಯ ಡ್ಯಾನ್ಸ್ ಸ್ಪರ್ಧೆಯಲ್ಲಿ ಮುಂಬೈಯ ‘ವಿ ಅನ್ಬೀಟೇಬಲ್’ ಡ್ಯಾನ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಕಳೆದ ವರ್ಷ ನಡೆದ ಅಮೆರಿಕಾ’ಸ್ ಗಾಟ್ ಟ್ಯಾಲೆಂಟ್ ಪ್ರಥಮ ಆವೃತ್ತಿಯ ಸ್ಪರ್ಧೆಯಲ್ಲಿ ಇದೇ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮೈನವಿರೇಳಿಸುವ ಸ್ಟಂಟ್ ಹಾಗೂ ನೆಗೆತದಿಂದ ಈ ತಂಡ ತೀರ್ಪುಗಾರರನ್ನು ಮೂಕವಿಸ್ಮಿತರನ್ನಾಗಿಸಿತು. ಫೈನಲ್ ಹಂತದಲ್ಲಿ ‘ವಿ ಅನ್ಬೀಟೇಬಲ್’ ತಂಡ ಬಾಲಿವುಡ್ ಸಿನೆಮಾದ ಹಾಡೊಂದಕ್ಕೆ ನೀಡಿದ ಅಭಿನಯ ತೀರ್ಪುಗಾರರ ಸಹಿತ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದು ಕಾರ್ಯಕ್ರಮದ ನಿರೂಪಕ ಟೆರ್ರೀ ಕ್ರೂಸ್ ಫಲಿತಾಂಶ ಘೋಷಿಸುತ್ತಿದ್ದಂತೆಯೇ ಎಲ್ಲರೂ ಎದ್ದುನಿಂತು ಚಪ್ಪಾಳೆ ಬಡಿದರು.
ಮುಂಬೈ ಡ್ಯಾನ್ಸ್ ತಂಡ ಅಂತರಾಷ್ಟ್ರೀಯ ವೇದಿಕೆಯಲ್ಲಿ ತೋರಿದ ಸಾಧನೆಗೆ ಟ್ವಿಟರ್ನಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಮುಂಬೈಯ 29 ಮಂದಿ ಡ್ಯಾನ್ಸರ್ಗಳಿರುವ ಈ ತಂಡದ ಹೆಚ್ಚಿನ ಸದಸ್ಯರು ಕೊಳೆಗೇರಿ ಪ್ರದೇಶದವರಾಗಿದ್ದಾರೆ. ಭಾರತದ ಹಲವು ರಿಯಾಲಿಟಿ ಶೋಗಳಲ್ಲೂ ಈ ತಂಡ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದೆ.