ಗಾಂಧಿ ವಿರುದ್ಧ ಸುಳ್ಳು ಆಪಾದನೆ
ಇತ್ತೀಚೆಗೆ ಮಹಾತ್ಮಾ ಗಾಂಧಿಯವರನ್ನು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಅವಮಾನಿಸಲಾಗುತ್ತಿದೆ. ಅವರ ಮಾನಹಾನಿ ಮಾಡುವ ಹಲವಾರು ಹೇಳಿಕೆಗಳು ಕೇಳಿಬಂದಿವೆ. ಇವುಗಳಲ್ಲಿ ನಾಥೂರಾಮ್ ಗೋಡ್ಸೆಯನ್ನು ಓರ್ವ ‘ದೇಶಭಕ್ತ’ನೆಂದು ಹೊಗಳುವ ಪ್ರಜ್ಞಾ ಠಾಕೂರ್ ಹೇಳಿಕೆ ಎದ್ದುಕಾಣುತ್ತದೆ. ಯಾಕೆಂದರೆ ಅವರು ಆಳುವ ಪಕ್ಷದ ಟಿಕೆಟ್ ಪಡೆದು ಸಂಸತ್ತಿನ ಸದಸ್ಯೆಯಾದವರು. ವರದಿಗಳ ಪ್ರಕಾರ ಹಿಂದೂ ಮಹಾಸಭಾ ಮುಂದು ಮಾಡಿರುವ ಒಂದು ಬೇಡಿಕೆ: ಉತ್ತರಪ್ರದೇಶದ ಮೀರತ್ ಪಟ್ಟಣವನ್ನು ‘ಗೋಡ್ಸೆ ನಗರ್’ ಎಂದು ಪುನರ್‌ನಾಮಕರಣ ಮಾಡಬೇಕು ಎನ್ನುವುದಾಗಿದೆ. 2016ರ ಅಕ್ಟೋಬರ್ 2, ಮಹಾತ್ಮಾ ಗಾಂಧಿ ಅವರ ಜನ್ಮದಿನದಂದು ಮೀರತ್‌ನ ಹಿಂದೂ ಮಹಾಸಭಾ ಕಚೇರಿಯಲ್ಲಿ ಗೋಡ್ಸೆಯ ಪ್ರತಿಮೆಯನ್ನು ಸ್ಥಾಪಿಸಿದಂದಿನಿಂದ ಗೋಡ್ಸೆಯ ಹಲವಾರು ಪ್ರತಿಮೆಗಳನ್ನು ದೇಶದಲ್ಲಿ ಸ್ಥಾಪಿಸಲಾಗಿದೆ. ಈ ವರ್ಷ ಜನವರಿ 30ರಂದು ಗಾಂಧಿಯವರ ಹತ್ಯೆಯಾದ ವಾರ್ಷಿಕ ದಿನದಂದು ಹಿಂದೂ ಮಹಾಸಭಾದ ಸದಸ್ಯರು ಗೋಡ್ಸೆ ಪ್ರತಿಮೆಗೆ ಹಾರ ಹಾಕಿದ್ದಾರೆಂದು ವರದಿಯಾಗಿತ್ತು.
ಮಹಾತ್ಮಾರವರ ವಿರುದ್ಧ ಸುಳ್ಳು ಆಪಾದನೆಯ, ಮಾನಹಾನಿಯ ತೀರಾ ಇತ್ತೀಚಿನ ಘಟನೆ ಎಂದರೆ ಫೆಬ್ರವರಿ ಒಂದರಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸತ್ ಸದಸ್ಯ ಅನಂತಕುಮಾರ್ ಹೆಗಡೆಯವರು ನೀಡಿದ ಹೇಳಿಕೆ: ‘‘ಗಾಂಧೀಜಿಯವರು ನಡೆಸಿದ ಸ್ವಾತಂತ್ರ್ಯ ಚಳವಳಿ ಬ್ರಿಟಿಷರ ಒಪ್ಪಿಗೆ ಹಾಗೂ ಬೆಂಬಲದೊಂದಿಗೆ’’ ನಡೆಸಿದ ಒಂದು ‘‘ನಾಟಕ’’ವಾಗಿತ್ತು ಎನ್ನುವುದೇ ಆ ಹೇಳಿಕೆ. ಅವರು ಮುಂದುವರಿದು ಹೇಳಿದರು: ‘‘ಭಾರತ ಸ್ವಾತಂತ್ರ್ಯ ಪಡೆದದ್ದು ಆಮರಣ ಉಪವಾಸ ಮತ್ತು ಸತ್ಯಾಗ್ರಹದಿಂದಾಗಿ ಅಲ್ಲ... ಬಿಟಿಷರು ಹತಾಶರಾಗಿ ಸ್ವಾತಂತ್ರ್ಯ ನೀಡಿದ್ದರು...’’ ಆ ಬಳಿಕ ಹೆಗಡೆಯವರು ತನ್ನ ಹೇಳಿಕೆಯಿಂದ ಪಾರಾಗಲು ಯತ್ನಿಸಿದ ರಾದರೂ ಗಾಂಧೀಜಿಗೆ ಮತ್ತು ಅವರು ಸ್ವಾತಂತ್ರ್ಯ ಚಳವಳಿಗೆ ನೀಡಿದ ಅಭೂತಪೂರ್ವ ಕಾಣಿಕೆಗೆ ಮಸಿ ಬಳಿಯುವುದು ಅವರ ಹೇಳಿಕೆಗಳ ಹಿಂದಿನ ಪ್ರಯತ್ನವಾಗಿತ್ತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಯಾವ ರಾಜಕೀಯ ನಾಯಕನೂ, ಎಷ್ಟೇ ದೊಡ್ಡವನಿರಲಿ ವಿಮರ್ಶೆಯಿಂದ ಹೊರತಾಗಿರಕೂಡದು. ಇದು ಗಾಂಧಿಗೂ ಅನ್ವಯಿಸುತ್ತದೆ. ಅವರ ಜೀವಿತಾವಧಿಯಲ್ಲೇ ಅವರ ದೃಷ್ಟಿಕೋನಗಳು, ಅಭಿಪ್ರಾಯಗಳು, ವಿಚಾರಗಳು ವಿಮರ್ಶೆಗೆ, ಟೀಕೆಗೆ ಗುರಿಯಾಗಿದ್ದವು. ಉದಾಹರಣೆಗೆ, 1932ರಲ್ಲಿ ದಲಿತರಿಗೆ ನೀಡಲಾಗಿದ್ದ ಪ್ರತ್ಯೇಕ ಮತದಾರ ಕ್ಷೇತ್ರ ಹಾಗೂ ಮತದಾನ ವ್ಯವಸ್ಥೆಯನ್ನು ವಿರೋಧಿಸಿ ಗಾಂಧಿ ಆಮರಣಾಂತ ಉಪವಾಸ ಕೈಗೊಂಡಿದ್ದಕ್ಕಾಗಿ ಅಂಬೇಡ್ಕರ್ ಗಾಂಧಿಯನ್ನು ಟೀಕಿಸಿದ್ದರು. ಹಾಗೆಯೇ, ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಗಾಂಧಿ ಸಂಪೂರ್ಣವಾಗಿ ಅಹಿಂಸೆಯನ್ನು ಅವಲಂಬಿಸುವುದನ್ನು ಸುಭಾಷ್ ಚಂದ್ರ ಬೋಸ್ ಟೀಕಿಸಿದ್ದರು. ಅವರು ಗಾಂಧಿಯ ಕೈಗಾರಿಕಾ ವಿರೋಧಿ ನಿಲುವನ್ನು, ಕೈಗಾರೀಕರಣದ ವಿರುದ್ಧವಾದ ಅವರ ಅಭಿಪ್ರಾಯವನ್ನು ಕೂಡ ಒಪ್ಪಿರಲಿಲ್ಲ. ಆದರೂ ಈ ಇಬ್ಬರು ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು ಮತ್ತು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. 1944ರಲ್ಲಿ ರಂಗೂನ್‌ನಿಂದ ಮಾಡಿದ ಒಂದು ರೇಡಿಯೊ ಪ್ರಸಾರ ಭಾಷಣದಲ್ಲಿ ಬೋಸ್ ಅವರು ಗಾಂಧಿಯನ್ನು ‘ರಾಷ್ಟ್ರಪಿತ’ ಎಂದು ಉಲ್ಲೇಖಿಸಿದ್ದರು.
ಗಾಂಧಿಯವರ ಆರ್ಥಿಕ ವಿಚಾರಗಳನ್ನು, ಸಿದ್ಧಾಂತಗಳನ್ನು, ಅವರ ‘ಟ್ರಸ್ಟಿ ಶಿಪ್’ ಪರಿಕಲ್ಪನೆಯನ್ನು ಸಮಾಜವಾದಿ ಹಾಗೂ ಎಡ ಪಕ್ಷಗಳು ಟೀಕಿಸಿದ್ದವು. ಯಾಕೆಂದರೆ ‘ಟ್ರಸ್ಟಿ ಶಿಪ್’ ಸಿದ್ಧಾಂತದ ನೆಲೆಯಲ್ಲಿ ಭಾರತದ ಶ್ರೀಮಂತರು ದೇಶದ ಸಂಪತ್ತನ್ನು ಜನರ ಪರವಾಗಿ ಟ್ರಸ್ಟ್ ನಲ್ಲಿ ತಾವೇ ಕೈಗೆ ತೆಗೆದುಕೊಳ್ಳುವುದು ಸಾಧ್ಯವಾಗುತ್ತಿತ್ತು; ಶ್ರೀಮಂತರ ಕೈಯಲ್ಲಿ ದೇಶದ ಸಂಪತ್ತು ಶೇಖರವಾಗುತ್ತಿತ್ತು. ಜವಾಹರ್ ಲಾಲ್ ನೆಹರೂ ಅವರು ಸೇರಿದಂತೆ ಭಾರತವನ್ನು ಒಂದು ಆಧುನಿಕ ಉದ್ಯೋಗೀಕೃತ ರಾಷ್ಟ್ರವಾಗಿ ಮಾಡಲು ಬಯಸಿದ್ದವರು ಕೈಗಾರೀಕರಣದ ಕುರಿತು ಗಾಂಧೀಜಿಯವರಿಗಿದ್ದ ವಿರೋಧವನ್ನು ಹಾಗೂ ಸ್ವಯಂ ಆಡಳಿತದ ಹಳ್ಳಿಗಳು ಭಾರತದ ಆಡಳಿತದ ಮೂಲವಾಗಬೇಕು ಎನ್ನುವುದನ್ನು ಟೀಕಿಸಿದ್ದರು.
ಆದರೆ ಈ ಟೀಕೆ ವಿಮರ್ಶೆಗಳು ನಿಜವಾದ ಭಿನ್ನಾಭಿಪ್ರಾಯಗಳನ್ನಾಧರಿಸಿ ದವುಗಳಾಗಿದ್ದವು. ಆದರೆ ಸುಳ್ಳು ಆಪಾದನೆ ಹೊರಿಸುವುದು, ದ್ವೇಷ ಪೂರಿತವಾದ ಸುಳ್ಳುಗಳನ್ನು ಹರಡುವುದು, ಮಾನಹಾನಿಗೈಯುವುದು, ಅವಹೇಳನಕಾರಿಯಾದ ಹೇಳಿಕೆಗಳನ್ನು ನೀಡುವುದು ವಿಮರ್ಶೆಯಲ್ಲ. ಯಾಕೆಂದರೆ ಇವೆಲ್ಲ ಸುಳ್ಳುಗಳನ್ನು ಆಧರಿಸಿರುತ್ತದೆ. ಉದಾಹರಣೆಗೆ ದೇಶದ ವಿಭಜನೆಗೆ ಗಾಂಧೀಜಿಯವರು ಜವಾಬ್ದಾರರು ಎನ್ನುವುದು ಅಪ್ಪಟ ಸುಳ್ಳು. ಸತ್ಯ ಇದಕ್ಕೆ ತೀರ ವ್ಯತಿರಿಕ್ತವಾಗಿದೆ. ಕೊನೆಯವರೆಗೂ ಗಾಂಧೀಜಿ ವಿಭಜನೆಗೆ ವಿರೋಧಿಯಾಗಿದ್ದರು. ಆದ್ದರಿಂದಲೇ ದೇಶದ ಸ್ವಾತಂತ್ರ್ಯ ಸಮಾರಂಭದ ಆಚರಣೆಗಳಿಂದ ಅವರು ದೂರ ಉಳಿದು, ಬಂಗಾಲದಲ್ಲಿ ನಡೆಯುತ್ತಿದ್ದ ಕೋಮು ಗಲಭೆಯ ಗಾಯಗಳನ್ನು ಗುಣಪಡಿಸಲು ದಿಲ್ಲಿಯಿಂದ ಬಂಗಾಳಕ್ಕೆ ತೆರಳಿದ್ದರು. ದುರದೃಷ್ಟವಶಾತ್ ಸುಳ್ಳು ಆಪಾದನೆಗಳನ್ನು ಹೊರಿಸುವುದು ಭಾರತದಲ್ಲಿ ಒಂದು ಕುಶಲ ಕಲೆಯಾಗಿದೆ ಮತ್ತು ಇಂತಹ ಮಾನಹಾನಿಕಾರಕ ಸುಳ್ಳುಗಳನ್ನು ಹರಡಲು ವಿ2ದ್ಯುನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳು ಮುಖ್ಯ ಸಾಧನಗಳಾಗಿವೆ.
(ಲೇಖಕರು ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ ಅಂತರ್‌ರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕರಾಗಿದ್ದಾರೆ)
ಕೃಪೆ: thehindu