‘ಅಹಂಕಾರಿ ನಯವಂಚಕ’ ಟ್ರಂಪ್‌ರನ್ನು ಎದುರಿಸುವುದು ಹೇಗೆನ್ನುವುದು ನನಗೆ ಗೊತ್ತು
ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಪ್ರೈಮರಿಯಲ್ಲಿ ಮೈಕ್ ಬ್ಲೂಮ್‌ಬರ್ಗ್

ವಾಶಿಂಗ್ಟನ್, ಫೆ. 20: ‘ಅಹಂಕಾರಿ ನಯವಂಚಕ’ ಹಾಗೂ ‘ಸಾರ್ವಕಾಲಿಕ ಕೆಟ್ಟ ಅಧ್ಯಕ್ಷ’ ಡೊನಾಲ್ಡ್ ಟ್ರಂಪ್‌ರನ್ನು ಸೋಲಿಸಲು ನಾನೇ ಸರಿಯಾದ ಅಭ್ಯರ್ಥಿ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದಿಂದ ಟಿಕೆಟ್ ಬಯಸಿರುವ ನ್ಯೂಯಾರ್ಕ್‌ನ ಮಾಜಿ ಮೇಯರ್ ಮೈಕ್ ಬ್ಲೂಮ್‌ಬರ್ಗ್ ಬುಧವಾರ ಹೇಳಿದ್ದಾರೆ.
ಲಾಸ್ ವೇಗಸ್‌ನಲ್ಲಿ ನಡೆದ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಗಳ ಚರ್ಚಾ ಕೂಟದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
‘‘ಇಂದು ರಾತ್ರಿ ನಾವು ಎರಡು ಪ್ರಶ್ನೆಗಳನ್ನು ಎದುರಿಸಬೇಕು ಎಂದು ನನಗನಿಸುತ್ತದೆ. ಒಂದು, ಡೊನಾಲ್ಡ್ ಟ್ರಂಪ್‌ರನ್ನು ಯಾರು ಸೋಲಿಸಬಹುದು? ಹಾಗೂ ಎರಡು, ಅಧ್ಯಕ್ಷರಾಗಿ ಆಯ್ಕೆಯಾದರೆ ಯಾರು ಕೆಲಸ ಮಾಡಬಹುದು? ಈ ಎರಡೂ ಕೆಲಸಗಳನ್ನು ಸರಿಯಾಗಿ ಮಾಡಬಲ್ಲ ಅಭ್ಯರ್ಥಿ ನಾನೇ ಎಂದು ನಾನು ಹೇಳುತ್ತೇನೆ’’ ಎಂದು 78 ವರ್ಷದ ಬ್ಲೂಮ್‌ಬರ್ಗ್ ನುಡಿದರು.
‘‘ನಾನು ನ್ಯೂಯಾರ್ಕ್‌ನವ. ನ್ಯೂಯಾರ್ಕ್‌ನಿಂದ ಬಂದಿರುವ ಅಹಂಕಾರಿ ನಯವಂಚಕ ಡೊನಾಲ್ಡ್ ಟ್ರಂಪ್‌ರನ್ನು ಎದುರಿಸುವುದು ಹೇಗೆ ಎನ್ನುವುದು ನನಗೆ ಗೊತ್ತು. ನಾನು ಮೇಯರ್ ಆಗಿದ್ದೆ. ಸಂಕೀರ್ಣ, ಅತಿ ದೊಡ್ಡ ಹಾಗೂ ಈ ದೇಶದ ಅತಿ ದೊಡ್ಡ ವೈವಿಧ್ಯತೆಯ ನಗರ ನ್ಯೂಯಾರ್ಕನ್ನು ನಡೆಸುವುದು ಹೇಗೆಂದು ನನಗೆ ಗೊತ್ತು’’ ಎಂದರು.





