ಕಾಪು: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಕಾಪು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಸಮಿತಿ ಮತ್ತು ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ಅಡುಗೆ ಅನಿಲ ಬೆಲೆಯೇರಿಕೆ ನೀತಿಯನ್ನು ಖಂಡಿಸಿ ಗುರುವಾರ ಸಂಜೆ ಕಾಪು ಪೇಟೆಯಲ್ಲಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನದ ವಿರುದ್ಧ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ, ಹೋರಾಟ ನಡೆಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಬ್ಲಾಕ್ ಮಟ್ಟದಿಂದ ಬೂತ್ ಮಟ್ಟದವರೆಗು ವಿವಿಧ ಹಂತದ ಪ್ರತಿಭಟನೆಗಳು ನಡೆಯಲಿವೆ ಎಂದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಮಾತನಾಡಿ, ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲಕ್ಕೆ ಕೇವಲ 7 ರೂ. ಏರಿಕೆಯಾದಾಗ ಅದನ್ನು ಖಂಡಿಸಿ ರಸ್ತೆಗಿಳಿದಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದ ಮಹಿಳಾ ಮುಖಂಡರು ತಮ್ಮದೇ ಸರ್ಕಾರ ಒಂದೇ ದಿನ 146 ರೂ. ಏರಿಕೆ ಮಾಡಿದರೂ ಮಾತನಾಡದೆ ಸುಮ್ಮನೆ ಕುಳಿತು ಬಿಟ್ಟಿರುವುದು ಖಂಡನೀಯ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪಕ್ಷದ ಮುಖಂಡರಾದ ಸರಸು ಡಿ. ಬಂಗೇರ, ಫರ್ಜಾನಾ ಸಂಜಯ್, ಪ್ರೆಸಿಲ್ಲಾ ಡಿ. ಸೋಜ, ಸುಲೋಚನಾ ಬಂಗೇರ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವೆರೋ, ಚಂದ್ರಿಕಾ ಶೆಟ್ಟಿ, ಪುಟ್ಟಮ್ಮ ಶ್ರೀಯಾನ್, ಜ್ಯೂಲಿಯಟ್ ವೀರಾ ಡಿ. ಸೋಜ, ಗೋಪಾಲ್ ಪೂಜಾರಿ, ವೈ. ಗಂಗಾಧರ ಸುವರ್ಣ, ಸುನೀಲ್ ಬಂಗೇರ, ದೀಪಕ್ ಕುಮಾರ್ ಎರ್ಮಾಳ್, ದಿನೇಶ್ ಕೋಟ್ಯಾನ್ ಪಲಿಮಾರು, ನವೀನ್ ಎನ್. ಶೆಟ್ಟಿ, ಶ್ರೀಕರ ಅಂಚನ್, ಶಾಬು ಸಾಹೇಬ್, ಮಹಮ್ಮದ ಫಾರೂಕ್ ಚಂದ್ರನಗರ, ವಿವಿಧ ಜನಪ್ರತಿನಿ„ಗಳು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







