ದೇಶಪ್ರೇಮ ಮತ್ತು ದೇಶದ್ರೋಹ

ಭಾರತವೆಂಬ ಭೂಪ್ರದೇಶದ ಸಾಮಾನ್ಯ ಜನರೊಂದಿಗೆ, ರಕ್ತಸಂಬಂಧಗಳಲ್ಲಿ ಹೇಗೋ ಹಾಗೆ ಸಾಮಾಜಿಕ ಶ್ರಮಸಂಬಂಧಗಳಲ್ಲಿ ಬದುಕುತ್ತಿರುವ ಎಲ್ಲರೂ ದೇಶಪ್ರೇಮಿಗಳೇ. ಆದ್ದರಿಂದ, ಜನರ ದೇಶಪ್ರೇಮವನ್ನು ಶಂಕಿಸುವ, ಸಾಬೀತುಪಡಿಸಿ ಎಂದು ಆಗ್ರಹಿಸುವ ಅಥವಾ ಆಳುವವರನ್ನು ಪ್ರಶ್ನಿಸುತ್ತಾರೆಂಬ ಕಾರಣಕ್ಕಾಗಿ ಯಾರನ್ನೇ ಆಗಲಿ ‘ದೇಶದ್ರೋಹಿ’ಗಳೆಂದು ದೂಷಿಸುವ ಕ್ರಮಗಳು ಪ್ರಜಾತಾಂತ್ರಿಕವೂ ಅಲ್ಲ, ನ್ಯಾಯಯುತವೂ ಅಲ್ಲ.
18-19ನೇ ಶತಮಾನದ ಸ್ಕಾಟಿಷ್ ಕವಿ, ಸರ್ ವಾಲ್ಟರ್ ಸ್ಕಾಟ್ ಬರೆದ ‘Patriotism’ ಎಂಬ ಕವನ ಹೀಗೆ ಪ್ರಾರಂಭವಾಗುತ್ತದೆ:
Breathes there the man with soul so dead
who never to himself hath said
‘This is my own my native land’…
ಇದನ್ನು ಕುವೆಂಪುರವರು ಕನ್ನಡಿಸಿದ್ದು, ಅದು- ‘‘ದೇಶ ನನ್ನದು, ನನ್ನದು ನಾಡು
ಎನ್ನದ ಮಾನವನೆದೆ ಸುಡುಗಾಡು...’’ ಎಂದು ಪ್ರಾರಂಭವಾಗುತ್ತದೆ. ಅವರ ಅನುವಾದದಲ್ಲಿ "native' ಎಂಬ ಪದಕ್ಕಿರುವ ಅರ್ಥಪುಷ್ಟಿಯು ವ್ಯಕ್ತವಾಗುವುದಿಲ್ಲ.
ದೇಶಪ್ರೇಮ, ದೇಶಾಭಿಮಾನ ಮುಂತಾದ ಪದಗಳು ಮೇಲುನೋಟಕ್ಕೆ ಎಲ್ಲ ಮನುಷ್ಯರೂ, ಅವರು ಹುಟ್ಟಿ-ಬೆಳೆದು ವಾಸಿಸುವ ಅಥವಾ ವಲಸೆಹೋಗಿ ಜೀವಿಸುವ ಒಂದು ಭೂಪ್ರದೇಶಕ್ಕೂ ಅವರಿಗೂ ನಡುವೆ ಇರುವ ಭೌತಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಕುರಿತು ಹೇಳುವಂತೆ ತೋರುತ್ತವೆ. ನಾಡು, ದೇಶ ಎಂಬ ಪದಗಳು ಮೂಲಭೂತವಾಗಿ ಭೂ ಪ್ರದೇಶವನ್ನೇ ಕುರಿತು ಹೇಳುತ್ತವೆ. ಅವುಗಳ ವಿಶಾಲತೆಯನ್ನು ಹಿಗ್ಗಿಸುತ್ತಾ ಹೋದರೆ ಖಂಡ, ವಿಶ್ವ, ಜಗತ್ತು ಎಂದಾಗಿ, ಇಡೀ ಭೂಮಿಗೆ ವಿಸ್ತರಿಸುತ್ತದೆ. ಮತ್ತೂ ವಿಸ್ತರಿಸಿದರೆ, ಸಾಂದ್ರವಾಗಿರುವ ಭೂಮಿಯ ವಾಸ್ತವತೆಯು ಅಳ್ಳಕವಾಗುತ್ತಾ ಹೋಗಿ ಎಲ್ಲವನ್ನೂ ಒಳಗೊಳ್ಳುವ ‘ಬ್ರಹ್ಮಾಂಡ’ ಎಂಬ ಅಮೂರ್ತವಾದ ಭಾವನೆಯಾಗಿಬಿಡುತ್ತದೆ. ಅದರೊಂದಿಗಿನ ಮನುಷ್ಯ ಸಂಬಂಧವೂ ಸಹ ವಿಶಾಲಗೊಂಡು ‘ವಿಶ್ವಪ್ರೇಮ’ ಎಂದಾಗುತ್ತದೆ. ಅದೇ ರೀತಿಯಲ್ಲಿ ಈ ಸಂಬಂಧವನ್ನು ಕಿರಿದುಗೊಳಿಸುತ್ತಾ, ನಿರ್ದಿಷ್ಟಗೊಳಿಸುತ್ತಾ ಹೋದರೆ ಅದರ ಬಗ್ಗೆ ಇರುವ ಪ್ರೀತಿ, ಅಭಿಮಾನ ಮುಂತಾದವುಗಳೆಲ್ಲಾ ದೇಶ, ಪ್ರಾಂತ, ಜಿಲ್ಲೆ, ಊರು, ಕುಟುಂಬಗಳಿಗೆ ಕುಗ್ಗುತ್ತಾ ಕೊನೆಗೆ ಮನುಷ್ಯರ ಭೌತಿಕ ಮತ್ತು ಭಾವನಾತ್ಮಕ ಗಾಢ ಸಂಬಂಧಗಳ ಕೇಂದ್ರವಾದ ‘ಮನೆ’ಯನ್ನು ತಲುಪುತ್ತವೆ. ‘ಮನೆ’ಯಲ್ಲಿನ ತಂದೆ, ಅಜ್ಜ, ಅಜ್ಜಿ, ಸೋದರ-ಸೋದರಿ, ಬಂಧು-ಬಳಗವನ್ನು ಒಳಗೊಳ್ಳುತ್ತದೆ. ಈ ಸಂಬಂಧಗಳನ್ನು ಮತ್ತೂ ನಿರ್ದಿಷ್ಟಗೊಳಿಸಿದರೆ,
ಅದು ವ್ಯಕ್ತಿಯ ಹುಟ್ಟಿನೊಂದಿಗೆ ಬಿಡಿಸಲಾಗದಷ್ಟು ಗಾಢ ಸಂಬಂಧವಿರುವ ವ್ಯಕ್ತಿಗೆ ಅಂದರೆ ತಾಯಿಗೆ, ಇನ್ನೂ ನಿರ್ದಿಷ್ಟವಾಗಿ ತಾಯಿಯ ಗರ್ಭಕ್ಕೆ ಬಂದು ನಿಲ್ಲುತ್ತವೆ. ತಾಯಿಯ ಗರ್ಭದಲ್ಲಿರುವವರೆಗೂ ವ್ಯಕ್ತಿಗೆ (ಅಂದರೆ, ಮಗುವಿಗೆ) ಪೋಷಣೆ ಮತ್ತು ಭದ್ರತೆಗಳು ಕುಟುಂಬದ ಹಿನ್ನೆಲೆಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತವೆ. ಹುಟ್ಟಿದಮೇಲೆ ಪೋಷಣೆ ಮತ್ತು ಭದ್ರತೆಗಳು ಪಾಲನೆಯ ರೂಪದಲ್ಲಿ ತಾಯಿ-ತಂದೆ ಮತ್ತು ಕುಟುಂಬದ ಜನರಿಂದ ಸಾಮಾಜಿಕವಾಗಿ ದೊರೆಯುತ್ತವೆ. ಹುಟ್ಟಿನಿಂದ ಹಿಡಿದು ಸಾಯುವ ಕಡೆಯ ಕ್ಷಣದವರೆಗೂ ಪ್ರತಿ ವ್ಯಕ್ತಿಗೂ ಪೋಷಣೆ ಮತ್ತು ಭದ್ರತೆಗಳು ಬೇಕೇ ಬೇಕು. ‘ಎಲ್ಲಿಗೇ ಹೋದರೂ’, ‘ಮನೆಗೆ’ ಮರಳಬೇಕು ಎಂಬ ಹಂಬಲ ವ್ಯಕ್ತಿಗಳಲ್ಲಿ ಸದಾ ತುಡಿಯುತ್ತಿರುತ್ತದೆ. ಮನೆಯ ಸುಖ-ಕೌಟುಂಬಿಕ ನೆಮ್ಮದಿ ಇತ್ಯಾದಿ ಹಂಬಲಗಳೆಲ್ಲಾ ಹುಟ್ಟುವ ಮುಂಚಿನಿಂದಲೂ ಎಲ್ಲರಲ್ಲಿಯೂ ಇರುವಂತಹವೇ. ಇವು ವಾಸ್ತವದಲ್ಲಿ ತಾಯಿಯ ಗರ್ಭದಲ್ಲಿದ್ದುಕೊಂಡು, (ಯಾವ ಯತ್ನವನ್ನೂ ಮಾಡದೆ) ಮಗುವು ಹೊಕ್ಕಳು ಬಳ್ಳಿಯ ಮೂಲಕ ತಾಯಿಯಿಂದ ನೇರವಾಗಿ ಪಡೆಯುತ್ತಿದ್ದ ಪೋಷಣೆ (ಆಹಾರ-ಶಕ್ತಿ) ಮತ್ತು ಭದ್ರತೆ (ಸುರಕ್ಷತೆ)ಗಳನ್ನು ಸದಾ ಪಡೆಯುತ್ತಿರಬೇಕೆಂಬ ಹಂಬಲಗಳ ಮುಂದುವರಿಕೆಯೇ ಆಗಿದೆ. ತಾಯಿಯನ್ನು ಕಂಡಾಗ ಆಗುವ ಸಂತೋಷ, ಎಲ್ಲಿಗೇ ಹೋದರೂ ಮತ್ತೆ, ಮನೆಗೆ ಮರಳಿದಾಗ ಆಗುವ ಸಂತೋಷಕ್ಕೆ ಸಂವಾದಿಯಾದದ್ದು. ಈ ದೃಷ್ಟಿಯಿಂದ ತಾಯಿಯ ಗರ್ಭವನ್ನು ವ್ಯಕ್ತಿಯ ಮೊದಲ ‘ಮನೆ’ ಎಂದು ಕರೆಯಬಹುದು. ಈ ಅರ್ಥದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮನೆಗಳಿವೆ.
ಹುಟ್ಟುವುದಕ್ಕಿಂತ ಮುಂಚಿನ ಮನೆ, ಅಂದರೆ ತಾಯಿಯ ಗರ್ಭ ಮತ್ತು ಹುಟ್ಟಿದ ಮೇಲೆ ಪೋಷಣೆ ಮತ್ತು ಭದ್ರತೆಗಳನ್ನು ಒದಗಿಸುವ, ಅನುಭವಿಸುವ ತಾಣವಾದ ‘ನಮ್ಮ ಮನೆ’. ಗರ್ಭಿಣಿ ತಾಯಿಯು ಕೃಶಳಾಗಿರಲಿ ಅಥವಾ ಆರೋಗ್ಯವಂತಳಾಗಿರಲಿ, ಹೇಗೇ ಇದ್ದರೂ ಮಗುವಿಗೆ ಆಕೆಯ ಗರ್ಭವೇ ‘ಮನೆ’. ಹಾಗೆಯೇ ವ್ಯಕ್ತಿಯು ವಾಸಿಸುವ ಸ್ಥಳವು ಗುಡಿಸಲಾಗಿರಲಿ ಅಥವಾ ಬಂಗಲೆಯಾಗಿರಲಿ ಅದು ಮನೆಯೇ. ಈ ಎರಡರ ಸಂಯೋಜಿತ ರೂಪವೇ ತಾಯಿಯ ಮನೆ (ತವರು), ತಾಯಿಯ ಊರು (ಹುಟ್ಟಿದೂರು) ತಾಯಿಯ ಭಾಷೆ (ತಾಯ್ನುಡಿ) ಮತ್ತು ತಾಯಿ ಬದುಕುವ ನಾಡು (ತಾಯ್ನಿಡು). ‘ನನ್ನ ಮನೆ’ ಎಂದರೂ ಅದೇ, ‘ನನ್ನ ದೇಶ’ ಎಂದರೂ ಅದೇ. ಗರ್ಭಸ್ಥವಾಗಿರುವಾಗಲೇ ಭ್ರೂಣದ ಬೆಳವಣಿಗೆಯೊಂದಿಗೆ ಮತ್ತು ಮಗುವಿನ ಮೆದುಳಿನ ಬೆಳವಣಿಗೆಯೊಂದಿಗೆ ತಳಕುಹಾಕಿಕೊಂಡಿರುವ ತಾಯಿ ಮತ್ತು ಪೋಷಕಜನರ ಕುಟುಂಬ (ವಂಶ), ತಾಯ್ನುಡಿ, ತಾಯ್ನಿಡುಗಳ ಬಗೆಗಿನ ಗಾಢಪ್ರೇಮವು ಏಕಕಾಲಕ್ಕೆ ಭೌತಿಕವೂ ಹೌದು ಭಾವನಾತ್ಮಕವೂ ಹೌದು. ಈ ಕಾರಣಕ್ಕಾಗಿಯೇ ಈ ಸಂಬಂಧದ ಹೊಗಳಿಕೆ, ಪ್ರಶಂಸೆಗಳು ವ್ಯಕ್ತಿಗೆ ಅತೀವ ಸಂತೋಷವನ್ನು ಕೊಡುತ್ತದೆ. ತೆಗಳಿಕೆ ಅಥವಾ ನಿಂದನೆಗಳು ಭಾವೋದ್ರೇಕದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟಿಸುತ್ತವೆ.
ವ್ಯಕ್ತಿಗಳು ಸಣ್ಣವರಿದ್ದಾಗ ಪೋಷಣೆ ಮತ್ತು ಭದ್ರತೆಗಳನ್ನು ತಾಯಿತಂದೆಯರ ಮೂಲಕ ಕುಟುಂಬದಿಂದ ಪಡೆಯುತ್ತಾರೆ. ತಾಯಿಗೆ ಹತ್ತಿರವಿರುವ ಕುಟುಂಬದ ಸದಸ್ಯರು ಸ್ವತಹ ತಮ್ಮ ಪೋಷಣೆ ಮತ್ತು ಭದ್ರತೆಗಳನ್ನು ತಮ್ಮ ಸಾಮಾಜಿಕ ಶ್ರಮಗಳಿಂದ ಹುಟ್ಟುವ ಜೀವನಾಧಾರ ವಸ್ತುಗಳ ಮೂಲಕ, ತಾವಿರುವ ಭೂಪ್ರದೇಶದಿಂದ ಪಡೆಯುತ್ತಾರೆ. ಇವೆಲ್ಲವುಗಳ ಒಟ್ಟು ರೂಪವೇ ದೇಶ. ಈ ದೇಶದ ಬಗೆಗಿನ ವ್ಯಕ್ತಿಗಳ ಪ್ರೀತಿಯು ಏಕಕಾಲಕ್ಕೆ ಸ್ವಾಭಾವಿಕವಾದದ್ದು ಮತ್ತು ಸಾಮಾಜಿಕವಾದದ್ದು. ಹೀಗೆ, ದೇಶವೆಂದರೆ ಒಂದು ಭೂಪ್ರದೇಶ, ಅಲ್ಲಿ ಜೀವಿಸುವ ಜನರು, ಅವರ ಅಸ್ತಿತ್ವಕ್ಕಾಗಿ ಬಳಸುವ ಜೀವನಾಧಾರ ವಸ್ತುಗಳು ಮತ್ತು ಅವನ್ನು ಪಡೆಯಲು ಸಾಮಾಜಿಕವಾಗಿ ಬಳಸುವ ಶ್ರಮ ಮತ್ತು ಸಹಜೀವಿಗಳೊಂದಿಗಿನ ಶ್ರಮಸಂಬಂಧಗಳು ಎಲ್ಲವೂ ಕೂಡಿರುವ ವಾಸ್ತವವೇ ದೇಶ. ಇವುಗಳ ಬಗೆಗಿನ ಸ್ವಾಭಾವಿಕ ಪ್ರೀತಿಯೇ ದೇಶಪ್ರೇಮ.
ಹಾಗಿದ್ದಮೇಲೆ ‘ದೇಶಭಕ್ತಿ’ ಎಂಬುದು ಹುಟ್ಟಿದ್ದು ಹೇಗೆ? ಶ್ರಮಸಂಬಂಧಗಳಲ್ಲಿ ಜೀವನಾಧಾರ ವಸ್ತುಗಳನ್ನು ಉತ್ಪಾದಿಸಲು ಬೇಕಾದ ಉತ್ಪಾದನಾ ಸಾಧನಗಳನ್ನು ಬಲಿಷ್ಠರಾದ ಕೆಲವರು ತಮ್ಮ ಕೈಲಿಟ್ಟುಕೊಂಡು ತಾವು ಶ್ರಮಪಡದೆ, ಸಾಮಾನ್ಯಜನರ ಶ್ರಮದಿಂದ ಜೀವಿಸುತ್ತಾ ಅವರ ಪೋಷಣೆ- ಭದ್ರತೆಗಳನ್ನು ನಿಯಂತ್ರಿಸುವ ಶೋಷಕ ವ್ಯವಸ್ಥೆಯು ಸಾವಿರಾರು ವರ್ಷಗಳ ಹಿಂದಿನ ಗುಲಾಮಪದ್ಧತಿಯಲ್ಲಿ ರೂಢಿಗೆ ಬಂದಿತು.
ಈ ಆಧುನಿಕ ಕಾಲದಲ್ಲೂ ಇಂತಹ ಶೋಷಕ ವ್ಯವಸ್ಥೆಯು ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಹೆಸರುಗಳಲ್ಲಿ ಇಂದಿಗೂ ಜೀವಂತವಾಗಿದೆ. ಭೂಪ್ರದೇಶ, ಉತ್ಪಾದನಾಸಾಧನಗಳು ಮತ್ತು ಶ್ರಮಶಕ್ತಿಯ ಮೂಲವಾದ ಸಾಮಾನ್ಯಜನರು ಮತ್ತು ಅವರ ಸಂತಾನವನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವುದರಲ್ಲಿ ಬಲಿಷ್ಠರ ಎರಡು ಬಣಗಳ ನಡುವೆ ಹೊಡೆದಾಟ-ಕಾದಾಟಗಳು ನಡೆದಾಗಲೆಲ್ಲಾ ಬಲಿಷ್ಠರಿಗಾಗಿ ಕಾದಾಡಿ ಪ್ರಾಣಕೊಡಲು ಸಾಮಾನ್ಯಜನರನ್ನೇ ಬಳಸಿಕೊಳ್ಳುವುದು ಬಹು ಹಿಂದಿನಿಂದಲೂ ಬಳಕೆಯಲ್ಲಿರುವ ಮತ್ತೊಂದು ಕ್ರೂರಪದ್ಧತಿ. ಅವರಿಗೆ ಸಮವಸ್ತ್ರವನ್ನು ಹಾಕಿ ಆಯುಧಗಳನ್ನು ಕೊಟ್ಟು ಕಾದಾಡಲು ಕಳಿಸಿದರೆ ಅವರೇ ರಾಜಭಕ್ತಿಯುಳ್ಳ ಸೈನಿಕರು ಅಥವಾ ರಾಜಭಟರು. ಈ ಪದ್ಧತಿಯಿಂದಾಗಿ, ಸಾಮಾನ್ಯಜನರಲ್ಲಿ ಸ್ವಾಭಾವಿಕವಾಗಿ ಮತ್ತು ಸಾಮಾಜಿಕವಾಗಿ ಇದ್ದ ‘ದೇಶಪ್ರೇಮ’ವು ತಮ್ಮನ್ನು ನಿಯಂತ್ರಿಸುವ ಬಲಿಷ್ಠ ಶೋಷಕರ ಬಗ್ಗೆ ಇಟ್ಟುಕೊಳ್ಳಲೇಬೇಕಾದ ಭಯ ಮತ್ತು ಬಲವಂತದ ಗೌರವಗಳಿಗೆ ಮತ್ತೊಂದು ಹೆಸರಾದ ‘ದೇಶಭಕ್ತಿ’ಯಾಗಿ ಕಾಲಕ್ರಮೇಣ ಮಾರ್ಪಟ್ಟಿತು. ಹೀಗೆ ಸಾಮಾನ್ಯ ಜನರಿಗೆ ಪೋಷಣೆ ಮತ್ತು ಭದ್ರತೆಗಳನ್ನು ಒದಗಿಸುವ ‘ದೇಶ’ದ ಸ್ಥಾನವನ್ನು ಬಲಿಷ್ಠರಾದ ಶೋಷಕರು ಆಕ್ರಮಿಸಿಕೊಂಡು ತಾವೇ ದೇಶವೆಂದು, ತಮ್ಮ ಬಗ್ಗೆ ಸಾಮಾನ್ಯಜನರು ಇಟ್ಟುಕೊಳ್ಳಬೇಕಾದ ಭಯ-ಗೌರವಗಳೇ ದೇಶಭಕ್ತಿಯೆಂದು ಬಲಾತ್ಕರಿಸುತ್ತಾ ಬಂದದ್ದರ ಫಲವಾಗಿ ‘ದೇಶಪ್ರೇಮ’ದ ಸ್ಥಾನದಲ್ಲಿ, ‘ದೇಶಭಕ್ತಿ’ಯೆಂಬ ಪರಿಕಲ್ಪನೆಯು ಪ್ರತಿಷ್ಠಾಪನೆಗೊಂಡಿತು.
ದೇಶಪ್ರೇಮವು ಅಥವಾ ರಾಷ್ಟ್ರಪ್ರೇಮವು ಸ್ವಾಭಾವಿಕವಾದದ್ದು ಮತ್ತು ಸಾಮಾಜಿಕವಾದದ್ದು. ದೇಶಭಕ್ತಿ ಎಂಬುದು ಊಳಿಗಮಾನ್ಯ ರಾಜಕೀಯದ ಪರಿಕಲ್ಪನೆ. ಅದನ್ನು ನಂಬುವವರ ದೃಷ್ಟಿಯಲ್ಲಿ ಜನರು ತಮ್ಮನ್ನು ನಿಯಂತ್ರಿಸುವ ಶೋಷಕರ ಬಗ್ಗೆ ಭಯ-ಭಕ್ತಿಯನ್ನು ತೋರಿಸಿದರೆ, ಅದು ದೇಶಭಕ್ತಿ. ಅವರನ್ನೇ ಪ್ರಶ್ನಿಸಿದರೆ ಅಥವಾ ಅವರ ಬಗ್ಗೆ ಭಯ-ಭಕ್ತಿಯನ್ನು ತೋರಿಸದಿದ್ದರೆ ಅದು ‘ರಾಜದ್ರೋಹ’ ಅಥವಾ ‘ದೇಶದ್ರೋಹ’. ಸದ್ಯದ ರಾಜಕೀಯ ಸಂದರ್ಭದಲ್ಲಿ ಸಂಘಪರಿವಾರದ ಆಳುವ ಜನರು ಪ್ರಜಾಪ್ರಭುತ್ವದ ವಿಧಾನದಲ್ಲೇ ಅಧಿಕಾರಕ್ಕೆ ಬಂದಿದ್ದರೂ ಸಹ ಅವರ ರಾಜಕೀಯಮೌಲ್ಯಗಳ ಬೇರುಗಳು ಇನ್ನೂ ಆಸ್ತಿಕ ಮೂಲದ ಊಳಿಗಮಾನ್ಯ ವ್ಯವಸ್ಥೆಯಲ್ಲೇ ಇವೆ. ಸಾಮಾನ್ಯ ಜನರಲ್ಲಿರುವ ಸ್ವಾಭಾವಿಕವಾದ ದೇಶಪ್ರೇಮವನ್ನು ಗುರುತಿಸಲಾಗದ ಅವರು ತಮ್ಮನ್ನು ಪ್ರಶ್ನಿಸುವವರೆಲ್ಲರನ್ನೂ ‘ದೇಶದ್ರೋಹಿ’ಗಳೆಂದು ಜರೆದು ಶಿಕ್ಷಿಸಲು ಹಾತೊರೆಯುತ್ತಾರೆ. ಭಾರತವೆಂಬ ಭೂಪ್ರದೇಶದ ಸಾಮಾನ್ಯ ಜನರೊಂದಿಗೆ, ರಕ್ತ ಸಂಬಂಧಗಳಲ್ಲಿ ಹೇಗೋ ಹಾಗೆ ಸಾಮಾಜಿಕ ಶ್ರಮಸಂಬಂಧಗಳಲ್ಲಿ ಬದುಕುತ್ತಿರುವ ಎಲ್ಲರೂ ದೇಶಪ್ರೇಮಿಗಳೇ. ಆದ್ದರಿಂದ, ಜನರ ದೇಶಪ್ರೇಮವನ್ನು ಶಂಕಿಸುವ, ಸಾಬೀತುಪಡಿಸಿ ಎಂದು ಆಗ್ರಹಿಸುವ ಅಥವಾ ಆಳುವವರನ್ನು ಪ್ರಶ್ನಿಸುತ್ತಾರೆಂಬ ಕಾರಣಕ್ಕಾಗಿ ಯಾರನ್ನೇ ಆಗಲಿ ‘ದೇಶದ್ರೋಹಿ’ಗಳೆಂದು ದೂಷಿಸುವ ಕ್ರಮಗಳು ಪ್ರಜಾತಾಂತ್ರಿಕವೂ ಅಲ್ಲ, ನ್ಯಾಯಯುತವೂ ಅಲ್ಲ.