ಲಕ್ನೋ: ಇಂಜಿನಿಯರಿಂಗ್ ವಿದ್ಯಾರ್ಥಿಯ ಬರ್ಬರ ಹತ್ಯೆ

ಲಕ್ನೋ: ಗೋಮತಿನಗರ ವಸತಿ ಪ್ರದೇಶದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಗುರುವಾರ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಪ್ರಶಾಂತ್ ಸಿಂಗ್ (23) ಎಂದು ಗುರುತಿಸಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಪರಿಚಿತರೊಬ್ಬರನ್ನು ಭೇಟಿ ಮಾಡಲು ತೆರಳಿದ್ದ ವೇಳೆ 10-12 ಮಂದಿಯ ಗುಂಪು ಈತನ ಮೇಲೆ ದಾಳಿ ಮಾಡಿ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿತು ಎಂದು ತಿಳಿದುಬಂದಿದೆ.
ವಿದ್ಯಾರ್ಥಿ ಪ್ರಯಾಣಿಸುತ್ತಿದ್ದ ಕಾರನ್ನು ಗುಂಪು ತಡೆದಿದೆ. ವಾಹನದಲ್ಲಿ ಮುಂದೆ ಇದ್ದ ಇಬ್ಬರ ಮೇಲೆ ದಾಳಿ ಮಾಡಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಪ್ರಶಾಂತ್ ಸಿಂಗ್ ಕಾರಿನಿಂದ ಇಳಿದು ಓಡಿದ್ದಾರೆ. ಎದೆಗೆ ಕೈಹಿಡಿದುಕೊಂಡು ಕಟ್ಟಡದತ್ತ ಧಾವಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಕಟ್ಟಡದ ಒಳಗೆ ಪ್ರಶಾಂತ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆಯ ವೇಳೆ ಅವರು ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ. ಸಿಂಗ್ ವಾರಣಾಸಿ ಮೂಲದವನಾಗಿದ್ದು, ಉತ್ತರ ಪ್ರದೇಶದ ರಾಜಧಾನಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಕಲಿಯುತ್ತಿದ್ದರು.
ಹಿಂದಿನ ದಿನ ರಾತ್ರಿ ಪಕ್ಕದ ಬಾರಾಬಂಕಿ ಜಿಲ್ಲೆಯಲ್ಲಿ ಸ್ನೇಹಿತನ ಹುಟ್ಟುಹಬ್ಬಕ್ಕೆ ಹೋದ ಸಂದರ್ಭದಲ್ಲಿ ಸಿಂಗ್ ಹಾಗೂ ಕಿರಿಯ ವಿದ್ಯಾರ್ಥಿಯೊಬ್ಬನಿಗೆ ಜಗಳವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.







