ಶ್ರೀರಾಮಸೇನೆ ಪ್ರತಿಭಟನೆಯಲ್ಲಿ ಆಕ್ಷೇಪಾರ್ಹ ಭಿತ್ತಿಪತ್ರ ಪ್ರದರ್ಶನ: ಯುವತಿಗೆ ಮಾ.5ರವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು, ಫೆ.21: ಪುರಭವನದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಫ್ರೀ ಕಾಶ್ಮೀರ, ಫ್ರೀ ದಲಿತ ಎಂಬ ಭಿತ್ತಿಪತ್ರ ಹಿಡಿದು ಕೂತಿದ್ದ ಪ್ರಕರಣದಲ್ಲಿ ಯುವತಿ ಆರ್ದ್ರಾಗೆ ನಗರದ 6ನೆ ಎಸಿಎಂಎಂ ಕೋರ್ಟ್ ಮಾ.5ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಶುಕ್ರವಾರ ಇಲ್ಲಿನ ಪುರಭವನದ ಮುಂಭಾಗದಲ್ಲಿ ಶ್ರೀರಾಮಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಇನ್ನಿತರ ಸಂಘಟನೆಗಳ ನೇತೃತ್ವದಲ್ಲಿ ಯುವತಿ ಅಮೂಲ್ಯ ವಿರುದ್ಧ ಟೌನ್ ಹಾಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಮಲ್ಲೇಶ್ವರಂ ಮೂಲದ ಯುವತಿ ಆರ್ದ್ರಾ ಎಂಬವರು ಫ್ರೀ ಕಾಶ್ಮೀರ ಘೋಷಣೆಯುಳ್ಳ ಭಿತ್ತಿಪತ್ರ ಹಿಡಿದಿದ್ದರು.
ಕೂಡಲೇ ಆರ್ದ್ರಾರನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ಐಪಿಸಿ ಸೆಕ್ಷನ್ 153ಎ, 153ಬಿ ಶಾಂತಿ ಭಂಗ ಹಾಗೂ ಕೋಮುಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಪೊಲೀಸರು ಯುವತಿಯನ್ನು ವೈದ್ಯಕೀಯ ತಪಾಸಣೆ ನಡೆಸಿ, ಸರಕಾರಿ ರಜೆ ಇರುವುದರಿಂದ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದ್ದರು. ನ್ಯಾಯಾಧೀಶ ಕೃಷ್ಣಮೂರ್ತಿ ಅವರು ಮಾ.5ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.





