ಪ್ರಧಾನಿಯನ್ನು ಹಾಡಿ ಹೊಗಳಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ

ಅರುಣ್ ಮಿಶ್ರಾ
ಹೊಸದಿಲ್ಲಿ: ಸುಮಾರು 1,500 ಬಳಕೆಯಲ್ಲಿಲ್ಲದ ಕಾನೂನುಗಳನ್ನು ತೆಗೆದು ಹಾಕಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಅರುಣ್ ಮಿಶ್ರಾ ಮುಕ್ತಕಂಠದಿಂದ ಹೊಗಳಿದ್ದಾರೆ.
ಪ್ರಧಾನಿ ಮೋದಿ ಅವರು ಜಾಗತಿಕವಾಗಿ ಯೋಚಿಸಿ ಸ್ಥಳೀಯವಾಗಿ ಕಾರ್ಯಾಚರಿಸುವ "ಅಂತಾರಾಷ್ಟ್ರೀಯ ಖ್ಯಾತಿವೆತ್ತ ದಾರ್ಶನಿಕ ಹಾಗೂ ಮಹಾ ಮೇಧಾವಿ,'' ಎಂದು ಅವರು ಬಣ್ಣಿಸಿದ್ದಾರೆ.
ಸುಪ್ರೀಂ ಕೋರ್ಟಿನಲ್ಲಿ ಇಂದು ಆಯೋಜಿಸಲ್ಪಟ್ಟ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ-2020ರ ಉದ್ಘಾಟನೆ ನೆರವೇರಿಸಿ ಭಾಷಣ ಮಾಡಿದ ನಂತರ ಧನ್ಯವಾದ ಅರ್ಪಣೆ ವೇಳೆ ಸುಪ್ರೀಂ ಕೋರ್ಟಿನ ಮೂರನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಜಸ್ಟಿಸ್ ಮಿಶ್ರಾ ಮೇಲಿನಂತೆ ಹೇಳಿದರು.
"ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರಜಾಪ್ರಭುತ್ವ ಹೇಗೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಜನರು ಅಚ್ಚರಿ ಪಡುತ್ತಾರೆ,'' ಎಂದು ಅವರು ಹೇಳಿದರು.
"ಅಂತಾರಾಷ್ಟ್ರೀಯ ಖ್ಯಾತಿವೆತ್ತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಅಂತಾರಾಷ್ಟ್ರೀಯ ಸಮುದಾಯದ ಅತ್ಯಂತ ಜವಾಬ್ದಾರಿಯುತ ಹಾಗೂ ಸ್ನೇಹಮಯಿ ಸದಸ್ಯ,''ಎಂದೂ ಜಸ್ಟಿಸ್ ಮಿಶ್ರಾ ಶ್ಲಾಘಿಸಿದರು.





