ಟ್ರಂಪ್ ಭೇಟಿಗೆ ಮುನ್ನ ನಿರುದ್ಯೋಗ ಸಮಸ್ಯೆ ಕುರಿತು ಬಿಜೆಪಿಯತ್ತ ಟ್ವೀಟ್ ಬಾಣ ಬಿಟ್ಟ ಕಾಂಗ್ರೆಸ್

ಹೊಸದಿಲ್ಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎದುರುಗೊಳ್ಳಲು ಆಡಳಿತಯಂತ್ರ ಸಕಲ ಏರ್ಪಾಟುಗಳಲ್ಲಿ ಮಗ್ನವಾಗಿರುವಂತೆಯೇ ನಿರುದ್ಯೋಗ ಸಮಸ್ಯೆ ಹಾಗೂ ಆರ್ಥಿಕ ನಿಧಾನಗತಿ ಕುರಿತಂತೆ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದೆ.
"ಮೋದೀ ಜಿ ನೀಡಿದ್ದ 2 ಕೋಟಿ ಭರವಸೆಯಲ್ಲಿ 69 ಲಕ್ಷ ಖಾಲಿ ಹುದ್ದೆಗಳನ್ನು ಘೋಷಿಸಲಾಗಿದೆ, ಈಗಲೇ ಅರ್ಜಿ ಸಲ್ಲಿಸಿ,'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ನಿರುದ್ಯೋಗ ಕುರಿತಂತೆ ಕೇಂದ್ರವನ್ನು ಅಣಕವಾಡುವ ಪೋಸ್ಟರ್ ಒಂದನ್ನೂ ಕಾಂಗ್ರೆಸ್ ಶೇರ್ ಮಾಡಿ ಕೇಂದ್ರವನ್ನು ವ್ಯಂಗ್ಯವಾಡಿದೆ.
"ಡೊನಾಲ್ಡ್ ಟ್ರಂಪ್ ನಾಗರಿಕ್ ಅಭಿನಂದನ್ ಸಮಿತಿ. ಈಗ ನೇಮಕಾತಿಗೊಳಿಸಲಾಗುತ್ತಿದೆ. ಉದ್ಯೋಗ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರತ್ತ ಕೈಬೀಸುವುದು. ಖಾಲಿ ಹುದ್ದೆಗಳು " 69 ಲಕ್ಷ, ಸಂಭಾವನೆ : ಅಚ್ಚೇ ದಿನ್...'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಪಕ್ಷದ ಈ ಟ್ವೀಟ್‍ಗೆ ಕಿಡಿ ಕಾರಿರುವ ಬಿಜೆಪಿ, ಜಾಗತಿಕವಾಗಿ ದೇಶದ ಸ್ಥಾನಮಾನ ಏರಿಕೆಯಾಗುತ್ತಿರುವುದು ವಿಪಕ್ಷಗಳಿಗೆ ಅಸಂತೋಷ ತಂದಿದೆ. "ಇದು ಜಗತ್ತಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಹಳೆಯ ಪ್ರಜಾಪ್ರಭುತ್ವಗಳ ಭೇಟಿ. ಇದನ್ನು ಸಂಭ್ರಮಿಸಬೇಕಿದೆ,'' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
69 lakh vacancies of the 2 cr promised by Modiji have been announced. Apply now. Hurry! #Jumla7MillionKa pic.twitter.com/4jA27gQL16
— Congress (@INCIndia) February 22, 2020







