ಭಾರತವನ್ನು 'ಸೇಲ್' ಮಾಡಿ, ಎನ್‌ಆರ್‌ಸಿ, ಸಿಎಎ ಮೂಲಕ ‘ಜೈಲ್’ ಮಾಡಲು ಯತ್ನ: ದೇವನೂರ ಮಹಾದೇವ

ಬೆಂಗಳೂರು, ಫೆ.22: ಸಂವಿಧಾನದ ಆಶಯಕ್ಕೆ ಕಳಂಕ ತಂದಿರುವ 2003ರ ಪೌರತ್ವ ನಿಯಮವನ್ನು ಹಾಗೂ ಪೌರತ್ವ ಕಾಯ್ದೆಯ 14ಎ ಹಿಂಪಡೆಯಬೇಕು ಎಂದು ಇಡೀ ಭಾರತ ಒಕ್ಕೊರಲಿನಿಂದ ಕೂಗಿ ಕೇಳಬೇಕಾಗಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಸಿಎಎ, ಎನ್‌ಪಿಆರ್ ಜಾರಿಗೆ ಮುಂದಾಗುತ್ತಿದೆ ಎಂದರು.
ಭಾರತವನ್ನೇ ಸೇಲ್-ಜೈಲ್ ಮಾಡಲು ಯತ್ನ: ಸರಕಾರ ತನ್ನನ್ನು ಆಯ್ಕೆ ಮಾಡಿದ ಜನರ ಮೇಲೆ ದಾಖಲೆ ನೀಡಿ ಎಂದು ದಬ್ಬಾಳಿಕೆ ನಡೆಸಲು ಮುಂದಾಗಿದೆ. ಒಂದು ಕಡೆ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ಭಾರತವನ್ನು ಸೇಲ್ ಮಾಡುತ್ತಾ, ಮತ್ತೊಂದು ಕಡೆ ಎನ್‌ಪಿಆರ್, ಎನ್‌ಆರ್‌ಸಿ, ಸಿಎಎ ತಂದು ಭಾರತವನ್ನೇ ‘ಜೈಲ್’ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ಇದನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಿದೆ ಎಂದು ದೇವನೂರು ನುಡಿದರು.
ಅಂತಃಕರಣವಿಲ್ಲದ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಬಂದ ಬಳಿಕ ವೃತ್ತಿ ಸಂಘಟನೆಗಳ ಕಾಲಿಗೆ ಸರಪಳಿ ಕಟ್ಟಿದಂತಾಗಿ, ನಡೆಯಲು ಕಷ್ಟವಾಗುತ್ತಿದೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡದಂತೆ ಪ್ರತಿಭಟನೆ ನಡೆಯುತ್ತಿವೆ. ಆದರೆ, ಇದಕ್ಕೂ ನಮಗೂ ಸಂಬಂಧವಿಲ್ಲದಂತೆ ಸಾರ್ವಜನಿಕರು ನೋಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಿಪಿಸಿಎಲ್ ಐದು ವರ್ಷಗಳಲ್ಲಿ 5 ಸಾವಿರ ಕೋಟಿ ಲಾಭ ಗಳಿಸಿದೆ. ಆದರೆ, ಇದನ್ನು 60 ಸಾವಿರ ಕೋಟಿಗೆ ಮಾರಾಟಕ್ಕಿಡಲಾಗಿದೆ. ಇದೇ ರೀತಿಯಲ್ಲಿ ಲಾಭದಾಯಕವಾದ ಐದಾರು ಸಾರ್ವಜನಿಕ ಕ್ಷೇತ್ರಗಳ ಕತ್ತಿಗೂ ಚೂರಿ ಹಾಕಲಾಗಿದೆ. ಬ್ಯಾಂಕ್‌ಗಳ ವಿಲೀನ ಮಾಡುವ ಮೂಲಕ ಖಾಸಗೀಕರಣಕ್ಕೆ ಪ್ರೋತ್ಸಾಹ ನೀಡುತ್ತಿದ್ದು, 27 ಇದ್ದ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದು 12ಕ್ಕೆ ಇಳಿದಿವೆ ಎಂದು ನುಡಿದರು.
ಆಳುವ ವರ್ಗ ಬ್ಯಾಂಕ್‌ಗಳ ಬುಡವನ್ನೇ ಕತ್ತರಿಸಲು ಮುಂದಾಗಿದ್ದಾರೆ. ಗೌಪ್ಯತೆ ಕಾಯ್ದೆಯನ್ನು ಬದಲಾವಣೆ ಮಾಡುವಂತೆ ಕೂಡಲೇ ಹೋರಾಟ ರೂಪಿಸಬೇಕಿದೆ. ಉಳ್ಳವರ ಗೌಪ್ಯತೆ ಕಾಪಾಡುವ ಆರ್‌ಬಿಐ ಕಾಯ್ದೆ 45(ಇ) ರದ್ದಾಗುವವರೆಗೂ ಹೋರಾಟ ಮಾಡುವ ಕಡೆಗೆ ಮುಂದಾಗಬೇಕಿದೆ ಎಂದು ದೇವನೂರ ಮಹಾದೇವ ತಿಳಿಸಿದರು.
ಸರಕಾರ ತಾನು ಉಳಿಯಲು ಸಾರ್ವಜನಿಕ ಕಂಪೆನಿ ಹಾಗೂ ನೈಸರ್ಗಿಕ ಸಂಪತ್ತನ್ನು ಬಿಕರಿಗಿಟ್ಟಿದೆ. ನೋಟ್‌ಬ್ಯಾನ್ ಮಾಡಿ ದೇಶದ ಆರ್ಥಿಕತೆಯೇ ಹದಗೆಟ್ಟಿದೆ. ಜಿಎಸ್ಟಿಯಿಂದ ಬಡವರ ಬದುಕು ಬಿಗಡಾಯಿಸಿದೆ. ಈಜಲು ಬಂದವರು ಸುಳಿಗೆ ಸಿಕ್ಕಿದಂತಾಗಿದೆ. ಬೆಲೆ ಏರಿಕೆಯಾಗುತ್ತಿದೆ. ಜನರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಇದು ಮರೆಮಾಚಲು ಸಿಎಎ ಜಾರಿಗೆ ಮುಂದಾಗಿದ್ದಾರೆ.
-ದೇವನೂರ ಮಹಾದೇವ, ಹಿರಿಯ ಸಾಹಿತಿ







