ಅಮೂಲ್ಯ ಅಲ್ಲ, ನಮಸ್ತೆ ಟ್ರಂಪ್ ಎಂದ ಮೋದಿ ದೇಶದ್ರೋಹಿ: ಹಿರಿಯ ನ್ಯಾಯವಾದಿ ಎಸ್.ಮಾರೆಪ್ಪ

ರಾಯಚೂರು, ಫೆ.22: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಆರೋಪದಡಿ ಬಂಧಿತವಾಗಿರುವ ಅಮೂಲ್ಯ ದೇಶದ್ರೋಹಿಯಲ್ಲ. ಬದಲಾಗಿ, ನಮಸ್ತೆ ಟ್ರಂಪ್ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ದೇಶದ್ರೋಹ ಮಾಡಿದ್ದಾರೆ ಎಂದು ಹಿರಿಯ ನ್ಯಾಯವಾದಿ ಎಸ್.ಮಾರೆಪ್ಪ ಹೇಳಿದರು.
ಶನಿವಾರ ಇಲ್ಲಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸಂವಿಧಾನ ಹಕ್ಕುಗಳ ರಕ್ಷಣಾ ವೇದಿಕೆಯಿಂದ ಶಿವರಾತ್ರಿ ನಿಮಿತ್ತ ಏರ್ಪಡಿಸಿದ್ದ ಸರ್ವಜನಾಂಗದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಮೂಲ್ಯಗೆ ಪೂರ್ಣವಾಗಿ ಮಾತನಾಡಲು ಆಯೋಜಕರು ಅವಕಾಶ ಮಾಡಿಕೊಡಬೇಕಿತ್ತು. ಅಲ್ಲದೆ, ಆಕೆಯ ಮಾತುಗಳಿಗೆ ಸಂಪೂರ್ಣ ಬೆಂಬಲ ಇದೆ ಎಂದು ನುಡಿದರು.
ಆಕೆ ಎಲ್ಲ ದೇಶಗಳಿಗೆ ಝಿಂದಾಬಾದ್ ಹೇಳುತ್ತಿದ್ದಳು. ಆದರೆ, ಹೇಳಲು ಬಿಟ್ಟಿಲ್ಲ ಎಂದ ಅವರು, ಅಮೂಲ್ಯ ಪ್ರತಿಭಾವಂತ ಯುವತಿಯಾಗಿದ್ದು, ವೇದಿಕೆಯಲ್ಲಿದ್ದ ಮುಸ್ಲಿಮ್ ಮುಖಂಡರು ಹೆದರಿಕೊಂಡು ಮಾತನಾಡಲು ಅವಕಾಶ ಕೊಟ್ಟಿಲ್ಲ ಎಂದು ಮಾರೆಪ್ಪ ತಿಳಿಸಿದರು.







