ಎಫ್‌ಎಟಿಎಫ್ ಬೂದುಪಟ್ಟಿಯಲ್ಲಿ ಪಾಕ್ ಮುಂದುವರಿಕೆ: ಪೂರ್ಣಾಧಿವೇಶನದಲ್ಲಿ ನಿರ್ಧಾರ
ಪ್ಯಾರಿಸ್ (ಫ್ರಾನ್ಸ್), ಫೆ. 22: ಭಯೋತ್ಪಾದನೆಗೆ ಪೂರೈಕೆಯಾಗುವ ಹಣದ ಮೇಲೆ ನಿಗಾ ಇಡುವ ಜಾಗತಿಕ ಸಂಸ್ಥೆ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಶುಕ್ರವಾರ ಪಾಕಿಸ್ತಾನವನ್ನು ತನ್ನ ‘ಬೂದುಪಟ್ಟಿ’ಯಲ್ಲೇ ಮುಂದುವರಿಸಲು ನಿರ್ಧರಿಸಿದೆ. ಅದೇ ವೇಳೆ, ಭಯೋತ್ಪಾದನೆಗೆ ಹಣ ಪೂರೈಸುತ್ತಿರುವವರನ್ನು ಶಿಕ್ಷಿಸಲು ಮತ್ತು ಅವರಿಗೆ ದಂಡ ವಿಧಿಸಲು ವಿಫಲವಾದರೆ ದೇಶದ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಅದು ಎಚ್ಚರಿಸಿದೆ.
ಆರು ದಿನಗಳ ಕಾಲ ನಡೆದ, ಶುಕ್ರವಾರ ಸಮಾಪನಗೊಂಡ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್‌ನ ಪೂರ್ಣಾಧಿವೇಶನದಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಸಂಪೂರ್ಣ ಕ್ರಿಯಾ ಯೋಜನೆಯನ್ನು ಜೂನ್ ವೇಳೆಗೆ ಪೂರ್ಣಗೊಳಿಸದಿದ್ದರೆ ಆ ದೇಶದ ವ್ಯಾಪಾರದ ಮೇಲೆ ಅದು ಪರಿಣಾಮ ಬೀರಬಹುದು ಎಂಬ ಎಚ್ಚರಿಕೆಯನ್ನೂ ಜಾಗತಿಕ ಸಂಸ್ಥೆ ಪಾಕಿಸ್ತಾನಕ್ಕೆ ನೀಡಿದೆ.
ಭಯೋತ್ಪಾದನೆಗೆ ಪೂರೈಕೆಯಾಗುತ್ತಿರುವ ಹಣದ ಹರಿವನ್ನು ನಿಲ್ಲಿಸಲು ಪಾಕಿಸ್ತಾನಕ್ಕೆ ನೀಡಲಾಗಿರುವ ಎಲ್ಲ ಗಡುವುಗಳು ಮುಗಿದಿವೆ, ಆದರೆ ಒಪ್ಪಿದ ಸಮಯದಲ್ಲಿ ತನ್ನ ಕ್ರಿಯಾ ಯೋಜನೆಯನ್ನು ಪೂರ್ಣಗೊಳಿಸಲು ಪಾಕಿಸ್ತಾನ ವಿಫಲವಾಗಿದೆ ಎಂದು ಎಫ್‌ಎಟಿಎಫ್ ಬಿಡುಗಡೆಗೊಳಿಸಿದ ಹೇಳಿಕೆಯೊಂದು ತಿಳಿಸಿದೆ.
ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನಕ್ಕೆ ನೀಡಲಾದ 27 ವಿಷಯಗಳ ಪೈಕಿ ಕೇವಲ 14ರಲ್ಲಿ ಅದು ಕ್ರಮ ತೆಗೆದುಕೊಂಡಿದೆ ಎಂದು ಎಫ್‌ಎಟಿಎಫ್ ತಿಳಿಸಿದೆ.
ಇರಾನ್ ಎಫ್‌ಎಟಿಎಫ್ ಕಪ್ಪುಪಟ್ಟಿಗೆ
ಭಯೋತ್ಪಾದನೆಗೆ ಹಣ ಪೂರೈಕೆಯಾಗುವುದರ ಮೇಲೆ ನಿಗಾ ಇಡುವ ಜಾಗತಿಕ ನಿಗಾ ಸಂಸ್ಥೆ ‘ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಇರಾನನ್ನು ತನ್ನ ಕಪ್ಪುಪಟ್ಟಿಯಲ್ಲಿರಿಸಿದೆ.
ಅಂತರ್‌ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಆರ್ಥಿಕ ನಿಯಮಾವಳಿಗಳನ್ನು ಅನುಸರಿಸಲು ವಿಫಲವಾಗಿರುವುದಕ್ಕಾಗಿ ಇರಾನ್ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಆರ್ಥಿಕ ಮಾರುಕಟ್ಟೆಗಳಿಂದ ಇರಾನನ್ನು ಇನ್ನಷ್ಟು ವಿಮುಖವಾಗಿಸುತ್ತದೆ.
‘‘ಎಫ್‌ಎಟಿಎಫ್ ಮಾನದಂಡಗಳಿಗೆ ಅನುಸಾರವಾಗಿ ಪಾಲೆರ್ಮೊ ಆ್ಯಂಡ್ ಟೆರರಿಸ್ಟ್ ಫೈನಾನ್ಸಿಂಗ್ ಕನ್ವೆನ್ಶನ್ಸ್ ಜಾರಿಗೊಳಿಸಲು ಇರಾನ್ ವಿಫಲವಾಗಿರುವ ಹಿನ್ನೆಲೆಯಲ್ಲಿ, ಇರಾನ್ ವಿರುದ್ಧದ ಪ್ರತೀಕಾರಾತ್ಮಕ ಕ್ರಮಗಳ ಮೇಲಿನ ತಡೆಯನ್ನು ಎಫ್‌ಎಟಿಎಫ್ ಸಂಪೂರ್ಣವಾಗಿ ತೆರವುಗೊಳಿಸಿದೆ ಹಾಗೂ ಪರಿಣಾಮಕಾರಿ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ತನ್ನ ಸದಸ್ಯ ದೇಶಗಳಿಗೆ ಕರೆ ನೀಡಿದೆ’’ ಎಂದು ಗುಂಪಿನ 39 ಸದಸ್ಯ ದೇಶಗಳು ವಾರದ ಅವಧಿಯ ಪೂರ್ಣಾಧಿವೇಶನದ ಬಳಿಕ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿವೆ.







