ಅಮೆರಿಕ ಚುನಾವಣೆಯಲ್ಲಿ ರಶ್ಯ ಮತ್ತೆ ಹಸ್ತಕ್ಷೇಪ?: ವರದಿ ತಳ್ಳಿಹಾಕಿದ ಟ್ರಂಪ್

ವಾಶಿಂಗ್ಟನ್, ಫೆ. 22: ಈ ವರ್ಷ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲೂ ರಶ್ಯ ಹಸ್ತಕ್ಷೇಪ ನಡೆಸುತ್ತಿದೆ ಎಂಬುದಾಗಿ ಅಮೆರಿಕದ ಗುಪ್ತಚರ ಇಲಾಖೆ ನೀಡಿದೆ ಎನ್ನಲಾದ ಎಚ್ಚರಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ತಳ್ಳಿಹಾಕಿದ್ದಾರೆ. ಈ ಸುದ್ದಿ ‘ಹುಸಿ’ಯಾಗಿದ್ದು, ಡೆಮಾಕ್ರಟಿಕ್ ಪಕ್ಷದಲ್ಲಿರುವ ನನ್ನ ಎದುರಾಳಿಗಳು ಸೃಷ್ಟಿಸಿದ್ದು ಎಂದು ಅವರು ಹೇಳಿದ್ದಾರೆ.
‘‘ಕಾಂಗ್ರೆಸ್‌ನಲ್ಲಿರುವ ಡೆಮಾಕ್ರಟ್‌ಗಳು ಇನ್ನೊಂದು ಅಪಪ್ರಚಾರ ಅಭಿಯಾನದಲ್ಲಿ ತೊಡಗಿದ್ದಾರೆ. ರಶ್ಯವು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಿಗಿಂತ ನನ್ನನ್ನು ಇಷ್ಟಪಡುತ್ತಿದೆ ಎಂದು ಅವರು ಹೇಳುತ್ತಿದ್ದಾರೆ. ಅಯೋವದಲ್ಲಿ ಪಕ್ಷದ ಆಂತರಿಕ ಚುನಾವಣೆ ನಡೆದು ಎರಡು ವಾರಗಳಾದರೂ ಮತಗಳನ್ನು ಎಣಿಸಲು ಅವರಿಗೆ ಸಾಧ್ಯವಾಗಿಲ್ಲ’’ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
‘‘ಇದು ಹುಸಿ ಸುದ್ದಿ ಸಂಖ್ಯೆ 7!’’ ಎಂಬುದಾಗಿ ಅವರು ಬಣ್ಣಿಸಿದ್ದಾರೆ.
ರಶ್ಯ ಈ ಬಾರಿಯೂ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರವಾಗಿ ಹಸ್ತಕ್ಷೇಪ ನಡೆಸುತ್ತಿದೆ ಎಂಬುದಾಗಿ ನ್ಯಾಶನಲ್ ಇಂಟಲಿಜನ್ಸ್‌ನ ನಿರ್ಗಮನ ನಿರ್ದೇಶಕ ಜೋಸೆಫ್ ಮ್ಯಾಗ್ವಯರ್ ಡೆಮಾಕ್ರಟಿಕ್ ಸಂಸದರಿಗೆ ರಹಸ್ಯ ಮಾಹಿತಿ ನೀಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.
ರಶ್ಯದಿಂದಲೂ ನಿರಾಕರಣೆ
ಮಾಸ್ಕೋ (ರಶ್ಯ), ಫೆ. 22: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಹಸ್ತಕ್ಷೇಪ ನಡೆಸುತ್ತಿದ್ದೇನೆ ಎಂಬ ಆರೋಪವನ್ನು ರಶ್ಯ ಶುಕ್ರವಾರ ನಿರಾಕರಿಸಿದೆ.
‘‘ಈ ಆರೋಪಗಳು ಎಂದಿನಂತೆ ಮಾನಸಿಕ ಅಸಮತೋಲನದಿಂದ ಕೂಡಿದ ಘೋಷಣೆಗಳಾಗಿವೆ. ದುರದೃಷ್ಟವಶಾತ್, ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಈ ರೀತಿಯ ಆರೋಪಗಳು ಹೆಚ್ಚುತ್ತವೆ’’ ಎಂದು ರಶ್ಯ ಸರಕಾರದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದರು.







