ದೇಶವಿರೋಧಿ ಹೇಳಿಕೆ ಹಿಂದೆ ದೊಡ್ಡ ಷಡ್ಯಂತ್ರ: ಗೃಹ ಸಚಿವ ಬೊಮ್ಮಾಯಿ

ದಾವಣಗೆರೆ, ಫೆ.22: ದೇಶವಿರೋಧಿ ಹೇಳಿಕೆ ಹಿಂದೆ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ನಮ್ಮ ರಾಜ್ಯದಲ್ಲೂ ಸಹ ಈ ಕೆಲಸ ನಡೆಯುತ್ತಿದೆ. ಅದಕ್ಕಾಗಿಯೇ ಫೆ.23ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವು ಘಟನೆಗಳು, ಹೊಸ ಬೆಳವಣಿಗೆಗಳು ನಡೆಯುತ್ತಿದೆ. ದೇಶದ್ರೋಹಿ ಕೃತ್ಯಗಳು ಹೆಚ್ಚಾಗುತ್ತಿವೆ. ಇದು ಒಂದು ವ್ಯವಸ್ಥಿತ ಸಂಚು ಹಾಗೂ ಷಡ್ಯಂತ್ರದ ಒಂದು ಭಾಗ. ವಿಶೇಷವಾಗಿ ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣು ಮಕ್ಕಳನ್ನು ಇಂತಹ ಕೆಲಸಗಳಿಗೆ ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ಕದಡುವ, ಗಲಭೆ ಸೃಷ್ಟಿಸುವ, ವೈಷಮ್ಯ ಉಂಟುಮಾಡುವ ಕೆಲಸ ನಡೆಯುತ್ತಿದೆ. ಧರ್ಮಗಳ ಮಧ್ಯೆ ಗಲಭೆ ಯತ್ನಿಸುವ ಕೆಲಸ ನಡೆಯುತ್ತಿದೆ. ಇದರ ಹಿಂದೆ ಇರುವ ಕಾಣದ ಶಕ್ತಿಗಳನ್ನು ನಿಗ್ರಹಿಸುವ ಕೆಲಸ ಮಾಡಲಾಗುವುದು ಎಂದರು.
ಬೆಂಗಳೂರಿನಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದೇಶದ್ರೋಹಿ ಹೇಳಿಕೆ ನೀಡಿರುವ ಅಮೂಲ್ಯ ಹಿಂದೆ ಕೆಲಸ ವ್ಯಕ್ತಿಗಳು ಹಾಗೂ ಸಂಘಟನೆಗಳು ಇವೆ. ಆಕೆಗೆ ಕುಮ್ಮಕ್ಕು ನೀಡುವುದು, ಜೊತೆಗೆ ಕಾನೂನು ನೆರವು ನೀಡುವ ಕೆಲಸ ನಡೆಯುತ್ತಿದೆ. ಇದರ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಇಂತಹ ಕೃತ್ಯದಲ್ಲಿ ಭಾಗಿಯಾದವರನ್ನು ಬೇರು ಸಹಿತ ಕಿತ್ತು ಹಾಕಲಾಗುವುದು ಎಂದರು.
ಕಲಬುರಗಿಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರದ ಮಾಜಿ ಶಾಸಕರು ಕೋಮುಭಾವನೆಗೆ ಧಕ್ಕೆ ತರುವ ರೀತಿ ಮಾತನಾಡಿದ್ದಾರೆ. ಈ ಬಗ್ಗೆಯೂ ಸಹ ಪ್ರಕರಣ ದಾಖಲಾಗಿದೆ. ಇನ್ನು ಶಾಸಕರ ಭವನಕ್ಕೆ ಮಾಧ್ಯಮದವರ ಪ್ರವೇಶ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು ಈ ವಿಚಾರ ಸ್ಪೀಕರ್ ವ್ಯಾಪ್ತಿಗೆ ಬರುತ್ತದೆ ಎಂದರು.







