'ಸ್ವಚ್ಛ ಭಾರತ್' ಅನುದಾನ ದುರ್ಬಳಕೆ ಆರೋಪ: ಪ್ರಕರಣ ಎಸಿಬಿ ತನಿಖೆಗೆ ವಹಿಸಿದ ನಗರಾಭಿವೃದ್ಧಿ ಇಲಾಖೆ
ಬೆಂಗಳೂರು, ಫೆ.22: ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿನ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ದಾಖಲೆ ಸಮೇತ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಈ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಿದೆ.
ಏನಿದು ಪ್ರಕರಣ: 2015-16ರಿಂದ 2017-18ರ ವರೆಗಿನ ಅವಧಿಯಲ್ಲಿ ಅವ್ಯವಹಾರ ನಡೆದಿದ್ದು, ಇದೇ ಅವಧಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಬರೋಬ್ಬರಿ 1,116 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿರುವ ಆರೋಪವಿದ್ದು, ಇದಕ್ಕೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಬಿಡುಗಡೆಯಾಗಿದ್ದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
2015-16ರಿಂದ 2017-18ರ ಅವಧಿಯಲ್ಲಿ 108 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 92 ಕೋಟಿ ರೂ. ಅನುದಾನದಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಸಂಬಂಧವಿಲ್ಲದ ಕಾರ್ಯಗಳಿಗೆ ಈ ಹಣವನ್ನು ಬಳಸಿಕೊಂಡ ಆರೋಪವಿದ್ದು, ಎರಡೂ ಪ್ರಕರಣಗಳನ್ನ ನಗರಾಭಿವೃದ್ಧಿ ಇಲಾಖೆ ಎಸಿಬಿ ತನಿಖೆಗೆ ವಹಿಸಿದೆ.





