ಯಕ್ಷಗಾನ ಕಲಾವಿದರ ಸೇವೆ ಸ್ಮರಣೀಯ: ರಮಾನಾಥ ರೈ
ಶಂಭೂರಿನಲ್ಲಿ ಬೊಂಡಾಲ ಪ್ರಶಸ್ತಿ ಪ್ರದಾನ

ಮಂಗಳೂರು, ಫೆ.22: ಯಕ್ಷಗಾನ ರಂಗಸ್ಥಳಕ್ಕೆ ಬಹಳ ಪಾವಿತ್ರ್ಯವಿದೆ. ಕಲಾವಿದರು ತಾವು ಪಾತ್ರ ನಿರ್ವಹಿಸುವ ರಂಗಸ್ಥಳದಲ್ಲೇ ಗೌರವ ಪಡೆಯುವುದು ಕೂಡ ಯೋಗಾಯೋಗ. ಅಂಥವರ ಕಲಾಸೇವೆ ಯಾವತ್ತೂ ಸ್ಮರಣೀಯವಾದುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ ಇತ್ತೀಚೆಗೆ ಜರುಗಿದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಆಟದ ರಂಗಸ್ಥಳದ ಮೇಲೆ ಏರ್ಪಡಿಸಲಾದ ‘ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಐದನೇ ಮೇಳದ ಹಿರಿಯ ಮದ್ದಲೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ವೇಷಧಾರಿ ರವಿರಾಜ ಪನೆಯಾಲ ಅವರಿಗೆ ಒಂಬತ್ತನೇ ವರ್ಷದ ’ಬೊಂಡಾಲ ಪ್ರಶಸ್ತಿ’ಯನ್ನು ರಮಾನಾಥ ರೈ ಪ್ರದಾನ ಮಾಡಿದರು.
ಲೆಕ್ಕಪರಿಶೋಧಕ ಬಿ.ಶಿವಾನಂದ ಪೈ ಅತಿಥಿಗಳಾಗಿದ್ದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಹಾಗೂ ಯಕ್ಷಾಂಗಣ ಮಂಗಳೂರು ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡಿ ದರು. ಬೊಂಡಾಲ ರತ್ನಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಸುಪ್ರೀತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಕೆ. ಲಕ್ಷ್ಮಿನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟ್ನ ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು.







