ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ತಜ್ಞರ ಸಮಿತಿ ರಚನೆಗೆ ಮುಂದಾದ ಬಿಬಿಎಂಪಿ

ಬೆಂಗಳೂರು, ಫೆ.22: ನಗರದಾದ್ಯಂತ ಇರುವ ಪಾರಂಪರಿಕ ಕಟ್ಟಡಗಳು ಹಾಗೂ ಪರಿಸರ ಸಂರಕ್ಷಣೆಯ ಸಲುವಾಗಿ ತಜ್ಞರ ಸಮಿತಿ ರಚನೆ ಮಾಡಲು ಬಿಬಿಎಂಪಿ ಮುಂದಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಕೆ.ಆರ್.ಮಾರುಕಟ್ಟೆ, ಟಿಪ್ಪು ಅರಮನೆ, ಕಲಾಸಿಪಾಳ್ಯದಲ್ಲಿನ ಹೈದರ್ ಅಲಿ ಕಾಲದ ಶಸ್ತ್ರಾಸ್ತ್ರ ಕಾರ್ಯಾಗಾರ, ವಿಧಾನಸೌಧ, ಕಸಾಪ ಕಟ್ಟಡ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳಿವೆ. ಇವುಗಳನ್ನು ಈಗಿರುವ ಸ್ಥಿತಿಯಲ್ಲಿಯೇ ಉಳಿಸಿಕೊಂಡು, ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ. ಪಾರಂಪರಿಕ ಕಟ್ಟಡ ಅಭಿವೃದ್ಧಿ, ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗಾಗಿ 50 ಕೋಟಿ ರೂ.ಅನುದಾನ ನೀಡುವಂತೆ ಪಾಲಿಕೆಯಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಮುಂದಾಗಿದೆ.
ಮೂಲ ಸ್ವರೂಪ ಉಳಿಸಲು ಯತ್ನ: ಪಾರಂಪರಿಕ ಕಟ್ಟಡಗಳು ಅವುಗಳ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಯಥಾಸ್ಥಿತಿಯಲ್ಲಿ ಅಭಿವೃದ್ಧಿ ಆಗಲಿವೆ. ಅವುಗಳ ಇತಿಹಾಸ, ರಚನೆಯ ಹಿಂದಿನ ಉದ್ದೇಶವನ್ನೂ ಜನರಿಗೆ ತಿಳಿಸಲು ಪಾಲಿಕೆ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಚಿತ್ರಕಲಾ ತಜ್ಞರನ್ನು ಸಮಿತಿಗೆ ಸೇರಿಸಲಾಗಿದೆ. ಪಾರಂಪರಿಕ ಕಟ್ಟಡಗಳಲ್ಲಿ ಮೈಸೂರು ತನ್ನದೇ ಆದ ಖ್ಯಾತಿ ಗಳಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ತಜ್ಞರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಲು ಪಾಲಿಕೆ ನಿರ್ಧರಿಸಿದೆ.
ತಜ್ಞರು ಮತ್ತು ಅನುಭವ: ಪಾರಂಪರಿಕ ಕಟ್ಟಡಗಳ ರಕ್ಷಣೆ ಉದ್ದೇಶದಿಂದ ರಚನೆಯಾಗುತ್ತಿರುವ ಸಮಿತಿಯಲ್ಲಿ ಹಲವು ಇಲಾಖೆಗಳ ತಜ್ಞರು ಇರಲಿದ್ದಾರೆ. ಬಿಬಿಎಂಪಿ ಆಯುಕ್ತ ಈ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಉಳಿದಂತೆ ಕನಿಷ್ಠ 10 ವರ್ಷ ಅನುಭವ ಹೊಂದಿರುವ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನ ಸದಸ್ಯ ಸ್ಟ್ರಕ್ಚರ್ ಇಂಜಿನಿಯರ್ ಹಾಗೂ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ, 10 ವರ್ಷ ಅನುಭವವಿರುವ ಹಾಗೂ ವಾಸ್ತುಶಿಲ್ಪಿ ಕೌನ್ಸಿಲ್‌ನ ಸದಸ್ಯತ್ವ ಪಡೆದಿರುವ ವಾಸ್ತುಶಿಲ್ಪತಜ್ಞರು ಸಮಿತಿಯ ಭಾಗವಾಗಿರುತ್ತಾರೆ.
ಯಾವುದಾದರು ಒಂದು ನಿರ್ದಿಷ್ಟ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಹಾಗೂ ಪರಿಸರ ಸಂರಕ್ಷಣೆ ವಿಷಯದಲ್ಲಿ ಕನಿಷ್ಠ 10 ವರ್ಷಗಳ ಅನುಭವಿರುವ ಪರಿಸರ ತಜ್ಞ ಮತ್ತು ಸರಕಾರದಿಂದ ಮಾನ್ಯತೆ ಪಡೆದ ಅಕಾಡೆಮಿಯಲ್ಲಿ ಇತಿಹಾಸ ಅಥವಾ ಪುರಾತತ್ವ ವಿಷಯದಲ್ಲಿ ಡಾಕ್ಟರೇಟ್ ಪಡೆದ ಇತಿಹಾಸ, ಪುರಾತತ್ವ ತಜ್ಞರು ಸಮಿತಿ ಸದಸ್ಯರಾಗಬಹುದು.
ಪಾರಂಪರಿಕ ಮನೆಗಳ ಉಳಿವಿಗೂ ಆದ್ಯತೆ: ಚಾಮರಾಜಪೇಟೆ, ಮಲ್ಲೇಶ್ವರ, ಬಸವನಗುಡಿ ಸೇರಿದಂತೆ ನಗರದ ಹಲವು ಹಳೆಯ ಪ್ರದೇಶಗಳಲ್ಲಿ ಶತಮಾನಗಳ ಹಿಂದೆ ನಿರ್ಮಾಣ ಮಾಡಿರುವ ಪಾರಂಪರಿಕ ವಸತಿ ಕಟ್ಟಡಗಳಿದ್ದು, ಅವುಗಳ ಉಳಿವಿಗೂ ಪಾಲಿಕೆ ಸ್ಪಂದಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನಗರದ ಹಲವು ಪಾರಂಪರಿಕ ಕಟ್ಟಡಗಳನ್ನು ಗುರುತಿಸುವ ಕೆಲಸವಾಗಿಲ್ಲ. ಗುರುತಿಸಿರುವ ಕಟ್ಟಡದ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ನಮ್ಮ ಪರಂಪರೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿದರೆ ನಮ್ಮ ನಗರದ ಬಗ್ಗೆ ಹೆಮ್ಮೆ ಮೂಡಲಿದೆ ಎಂದು ಹೇಳಿದ್ದಾರೆ.







