ಖೇಲೊ ಇಂಡಿಯಾ ವಿ.ವಿ. ಗೇಮ್ಸ್ ಗೆ ಪ್ರಧಾನಿ ಚಾಲನೆ

ಕಟಕ್, ಫೆ.22: ಮೊದಲ ಆವೃತ್ತಿಯ ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಸ್ಟೇಡಿಯಂನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ದೇಶಾದ್ಯಂತದ 159 ವಿಶ್ವ ವಿದ್ಯಾಲಯಗಳ ಸುಮಾರು 3,400 ಅಥ್ಲೀಟ್‌ಗಳು ರಗ್ಬಿ ಸಹಿತ 17 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಆರು ಟೀಮ್ ಸ್ಪರ್ಧೆಗಳಿವೆ.
ಪ್ರಧಾನಿ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ನ ವ್ಯವಸ್ಥೆಯ ಮುಖಾಂತರ ಬಹುಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿದರು. ‘‘ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಯುವಕರಲ್ಲಿ ಕ್ರೀಡೆಗಳು ಹಾಗೂ ಫಿಟ್ನೆಸ್ ಉತ್ತೇಜನಕ್ಕಾಗಿ ಇರುವ ಉತ್ತಮ ಪ್ರಯತ್ನವಾಗಿದೆ.ಇದು ಭಾರತೀಯ ಕ್ರೀಡೆಯ ಐತಿಹಾಸಿಕ ಕ್ಷಣ. ದೇಶ ಕ್ರೀಡಾ ಕ್ರಾಂತಿಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ’’ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು.
ಕೆಐಐಟಿ ವಿದ್ಯಾರ್ಥಿನಿಯಾಗಿರುವ ಓಟಗಾರ್ತಿ ದ್ಯುತಿ ಚಂದ್ ಕೂಡ ಗೇಮ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಮಂಗಳೂರು ವಿವಿ ಟ್ರಿಪಲ್ ಜಂಪರ್ ಜಯ ಶಾ, ನರೇಂದ್ರ ಸಿಂಗ್, ಪುಣೆ ವಿವಿಯ ದೂರ ಅಂತರದ ಓಟಗಾರ್ತಿ ಕೋಮಲ್ ಜಗದಾಳೆ ಸಹಿತ ಹಲವರು ಸ್ಪರ್ಧಿಸುತ್ತಿದ್ದಾರೆ.





