ಚಿಕ್ಕಮಗಳೂರು: ವಿರೋಧದ ನಡುವೆಯೂ ಜಿಲ್ಲಾ ಉತ್ಸವಕ್ಕೆ ಭರದ ಸಿದ್ಧತೆ
ಹೆಲಿಟೂರಿಸಂ ಉತ್ಸವ ಆಕರ್ಷಣೆ

ಚಿಕ್ಕಮಗಳೂರು, ಫೆ.22: ಬಿಜೆಪಿಯೇತರ ರಾಜಕೀಯ ಪಕ್ಷಗಳು ಹಾಗೂ ಕೆಲ ಪ್ರಗತಿಪರ, ರೈತ ಪರ ಸಂಘಟನೆಗಳ ವಿರೋಧದ ನಡುವೆಯೂ ಫೆ.28ರಿಂದ ಮಾ.1ರವರೆಗೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿರುವ ಜಿಲ್ಲಾ ಉತ್ಸವಕ್ಕೆ ನಗರದಲ್ಲಿ ಭರದ ಸಿದ್ಧತೆ ಆರಂಭವಾಗಿದೆ.
ಜಿಲ್ಲೆಯಲ್ಲಿ ಕಳೆದ ಆಗಸ್ಟ್ ನಲ್ಲಿ ಭಾರೀ ಮಳೆಯಿಂದಾಗಿ ಮಲೆನಾಡಿನಾದ್ಯಂತ ಭೂಕುಸಿತ, ನೆರೆಯಿಂದಾಗಿ ಮನೆ, ಜಮೀನು ಮುಳುಗಡೆಯಂತಹ ಪ್ರಾಕೃತಿಕ ಅವಘಡಗಳು ಭಾರೀ ಪ್ರಮಾಣದಲ್ಲಿ ಸಂಭವಿಸಿದ್ದವು. ಪರಿಣಾಮ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಅತಿವೃಷ್ಟಿ ಸಂತ್ರಸ್ತರಿಗೆ ಸರಕಾರ ಹಾಗೂ ಜಿಲ್ಲಾಡಳಿತ ಇನ್ನೂ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡಿಲ್ಲ ಎಂದು ಆರೋಪಿಸಿ ಜಿಲ್ಲಾಡಳಿತ ನಡೆಸಲು ಉದ್ದೇಶಿಸಿದ್ದ ಜಿಲ್ಲಾ ಉತ್ಸವಕ್ಕೆ ಹಲವು ಸಂಘಟನೆಗಳು ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದವು.
ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಈ ವಿರೋಧಕ್ಕೆ ಬೆಲೆ ನೀಡದೇ ಉತ್ಸವವನ್ನು ಮಾಡಿಯೇ ತೀರುತ್ತೇವೆಂದು ಹಠಕ್ಕೆ ಬಿದ್ದವರಂತೆ ಚಿಕ್ಕಮಗಳೂರು ಜಿಲ್ಲಾ ಉತ್ಸವವನ್ನು ಮಾಡಲು ಎಲ್ಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಫೆ.28ರಿಂದ ಮಾ.1ರವರೆಗೆ ನಡೆಯುವ ಜಿಲ್ಲಾ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೇ, ಕ್ರೀಡೆ, ಸಾಹಸ ಕ್ರೀಡೆಗಳು, ಜಾನಪದ, ಸಂಗೀತ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳಿಗಾಗಿ ಜಿಲ್ಲೆಯ ಸ್ಥಳೀಯ ಕಲಾವಿದರಲ್ಲದೇ ರಾಜ್ಯದ ಹೆಸರಾಂತ ಕಲಾವಿದರೂ ಆಗಮಿಸುತ್ತಿದ್ದಾರೆ.
ಜಿಲ್ಲಾ ಉತ್ಸವದ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಳ್ವಾಸ್ ಕಾಲೇಜಿನ ಡಾ.ಮೋಹನ್ ಆಳ್ವಾ ನೇತೃತ್ವದಲ್ಲಿ ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದ್ದು, ಆಳ್ವಾಸ್ ಕಾಲೇಜು ತಂಡದಿಂದಲೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲಾ ಉತ್ಸವದಲ್ಲಿ ಜರಗಲಿವೆ. ಮೂರು ದಿನಗಳ ಉತ್ಸವದಲ್ಲಿ ನಗರದ ಎಂಜಿ. ರಸ್ತೆಯ ಅಲ್ಲಲ್ಲಿ ಹಗಲು ಮತ್ತು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನಗರದ ಬೋಳರಾಮೇಶ್ವರ ದೇವಾಲಯ ಸಮೀಪ ದ ಅರಣ್ಯ ಇಲಾಖೆ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರದವರೆಗಿನ ರಸ್ತೆಯಲ್ಲಿ ಮೂರು ದಿನಗಳ ಕಾಲ ಸಸ್ಯಾಹಾರಿ ಹಾಗೂ ಮಾಂಸಾಹಾರ, ಸಿರಿಧಾನ್ಯಗಳ ವೈವಿಧ್ಯಮಯ ಆಹಾರ ಮೇಳವು ಮೂರು ದಿನಗಳ ಕಾಲ ನಡೆಯಲಿದೆ.
ಹೆಲಿಟೂರಿಸಂ ಜಿಲ್ಲಾ ಉತ್ಸವದ ಆಕರ್ಷಣೆ
ಜಿಲ್ಲಾ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ನಗರದಲ್ಲಿ ಜಿಲ್ಲಾಡಳಿತ ನಾಗರಿಕರಿಗಾಗಿ ಹೆಲಿಟೂರಿಸಂ ಅನ್ನು ಆಯೋಜಿಸಿದೆ. ಫೆ.28ರಂದು ಹೆಲಿಟೂರಿಸಮ್‍ಗೆ ಚಾಲನೆ ದೊರೆಯಲಿದ್ದು, ಒಂದು ಹೆಲಿಕಾಪ್ಟರ್ ಮೂಲಕ ನಗರ ಸೇರಿದಂತೆ ಮುಳ್ಳಯ್ಯನಗಿರಿ ಶ್ರೇಣಿಗಳ ವ್ಯಾಪಿಯಲ್ಲಿ ಸುತ್ತು ಹೊಡೆಯಲಿದೆ. ಹೆಲಿಕಾಪ್ಟರ್ ನಲ್ಲಿ ಕೂರಲು ಪ್ರತಿ ವ್ಯಕ್ತಿಗೆ 3 ಸಾವಿರ ಶುಲ್ಕ ವಿಧಿಸಲಾಗಿದ್ದು, ಶುಲ್ಕದ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದ್ದು, ಹೆಲಿಟೂರಿಸಂ ಜಿಲ್ಲಾ ಉತ್ಸವದ ಆಕರ್ಷಣೆಯಾಗಿ ಜನಮನ ಸೆಳೆಯಲಿದೆ.










