ಶಿವರಾತ್ರಿಯಂದು ಕಿಡಿಗೇಡಿಗಳ ಪುಂಡಾಟ: ದೈವಕ್ಕೆ ಮೊರೆ

ಉಪ್ಪಿನಂಗಡಿ : ಶಿವರಾತ್ರಿಯಂದು ಕೆಲವು ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಉಪ್ಪಿನಂಗಡಿ ಬಳಿಯ ಪೆರಿಯಡ್ಕದಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಇದರಿಂದ ನೊಂದವರು ದೈವದ ಮೊರೆ ಹೋದ ಘಟನೆ ನಡೆದಿದೆ.
ಇಲ್ಲಿನ ಶ್ರೀ ಚಾಮುಂಡೇಶ್ವರಿ ಸಿಮೆಂಟ್ ಪ್ರೊಡಕ್ಟ್ ನಲ್ಲಿ ತಯಾರಿಸಿಡಲ್ಪಟ್ಟ ಪಂಪ್‍ಶೆಡ್ ಹಾಗೂ ಸಿಮೆಂಟ್ ಒಲೆಯನ್ನು ಕಿಡಿಗೇಡಿಗಳು ಪುಡಿ ಮಾಡಿದ್ದು, ಅಲ್ಲಿದ್ದ ಸಿಮೆಂಟ್‍ನ ಕಂಬಗಳು, ತುಳಸಿಕಟ್ಟೆ ಸೇರಿದಂತೆ ಸಿಮೆಂಟ್‍ನಲ್ಲಿ ತಯಾರಿಸಲ್ಪಟ್ಟ ಉತ್ಪನ್ನಗಳನ್ನು ಚರಂಡಿ, ಪೊದೆ ಸೇರಿದಂತೆ ಎಲ್ಲೆಂದರಲ್ಲಿ ಎಸೆದಿದ್ದರು. ಈ ಪುಂಡರ ವಿಕೃತಿಯಿಂದಾಗಿ ಮಾಲಕ ದಿಲೀಪ್ ಶೆಟ್ಟಿಯವರಿಗೆ ಸಾವಿರಾರು ರೂ. ನಷ್ಟವಾಗಿದ್ದು, ಮನನೊಂದ ಇವರು ಕಾರಣಿಕ ಕ್ಷೇತ್ರವೊಂದರ ದೈವದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಹಸಿರು ಕಿತ್ತರು: ಅಲ್ಲದೇ ಇದೇ ಪರಿಸರದಲ್ಲಿ ಅರಣ್ಯ ಇಲಾಖೆ ರಸ್ತೆ ಬದಿ ಗಿಡಗಳನ್ನು ನೆಟ್ಟಿದ್ದು, ಅದನ್ನು ಅಲ್ಲೇ ಇರುವ ಅಂಗಡಿಯವರು ಜೋಪಾನ ಮಾಡಿದ್ದರಿಂದ ಅವು ಸೊಂಪಾಗಿ ಮರವಾಗಿ ಬೆಳೆಯುವ ಹಂತದಲ್ಲಿದ್ದು, ಪರಿಸರದಲ್ಲಿ ನೆರಳಿಗೆ ಕಾರಣವಾಗಿತ್ತು. ಆದರೆ ಕಿಡಿಗೇಡಿಗಳು ಇಲ್ಲಿದ್ದ ಚೆರಿ, ಪಪ್ಪಾಯಿ ಸೇರಿದಂತೆ ಹಲವು ಜಾತಿಯ ಗಿಡಗಳನ್ನು ಬುಡದಿಂದಲೇ ಕಡಿದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಅಂಗಡಿಯ ಎದುರಲ್ಲಿ ಬಾಟಲಿಗಳು, ಕಡಿದ ಗಿಡಗಳನ್ನು ಇಟ್ಟು ವಿಕೃತಿ ಪ್ರದರ್ಶನಗೈದಿದ್ದಾರೆ.
ಒಟ್ಟಿನಲ್ಲಿ ಶಿವರಾತ್ರಿಯ ನೆಪ ಮಾಡಿಕೊಂಡು ಕೆಲವು ಪುಂಡರು ಇನ್ನೊಬ್ಬರಿಗೆ ಹಾನಿ ಮಾಡಿ, ಗಿಡ ಮರಗಳನ್ನು ಕಡಿದುರುಳಿಸಿ ವಿಕೃತಿ ಮನೋಭಾವ ಪ್ರದರ್ಶಿಸುತ್ತಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.







