ಸರಕಾರಿ ಶಾಲೆ ಮಕ್ಕಳು ದೇಶದ್ರೋಹಿಗಳಾಗುವುದಿಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಮಧುಗಿರಿ, ಫೆ.22: ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಸುಸಂಸ್ಕೃತರಾಗಿ ಬೆಳದಿರುತ್ತಾರೆ. ಅವರು ದೇಶದ್ರೋಹಿ ಕೆಲಸಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಶತಮಾನೋತ್ಸವ ಆಚರಣೆ, ಸ್ಮರಣ ಸಂಚಿಕೆ ಬಿಡುಗಡೆ, ಕಟ್ಟಡ ಉದ್ಘಾಟನೆ ಹಾಗೂ ಹಳೇ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳು ತಲೆ ತಗ್ಗಿಸುವಂತೆ ಸರ್ಕಾರಿ ಶಾಲೆಗಳು ಉತ್ತಮ ವಿದ್ಯಾಭ್ಯಾಸ ನೀಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಕರು. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಶೇಕಡ 90ರಷ್ಟು ಶಿಕ್ಷಕರು ಉತ್ತಮ ನಡುವಳಿಕೆಯನ್ನು ಹೊಂದಿದ್ದು, ಮುಂದೊಂದು ದಿನ ಸರ್ಕಾರಿ ಶಾಲೆಗೆ ಹೋಗಲು ಸೇರಿಸಲು ಪೋಷಕರು ಮುಗಿಬೀಳುವುದರಲ್ಲಿ ಸಂಶಯವಿಲ್ಲ ಎಂದರು.
ನನ್ನ ತಾಯಿ 37 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ್ದು, ಶಿಕ್ಷಣ ಇಲಾಖೆಯ ಋಣ ತೀರಿಸಲು ನನಗೆ ಶಿಕ್ಷಣ ಖಾತೆ ದೊರಕಿದ್ದು, ಸರ್ಕಾರಿ ಶಾಲೆಗಳು ಉಳಿಯಲು ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಬರಗಾಲಕ್ಕೆ ತುತ್ತಾಗಿರುವ ತಾಲೂಕಿನಲ್ಲಿ ಶಿಕ್ಷಣವೊಂದೇ ಬಂಡವಾಳವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿಸಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರವೂ ಹೆಚ್ಚಿರುತ್ತದೆ. ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ತಾಯಿಯೇ ಮೊದಲ ಗುರು ಎಂದರು.
ಶಿಕ್ಷಣ ಇಲಾಖೆಗೆ ಸರ್ಕಾರ ನೀಡುತ್ತಿರುವ ಸವಲತ್ತುಗಳು ವಿದ್ಯಾರ್ಥಿಗಳಿಗೆ ತಲುಪಿಸಲು ಶಿಕ್ಷಕರು ಹಾಗೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರನ್ನು ಮಾದರಿಯಾಗಿ ತೆಗೆದುಕೊಂಡಿರುತ್ತಾರೆ. ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದರು.
ಸಮಾರಂಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ಸದಸ್ಯ ಸೊಸೈಟಿ ರಾಮಣ್ಣ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜಮ್ಮ ಅಶ್ವತ್ ನಾರಾಯಣ್, ಡಿಡಿಪಿಐ ರೇವಣ ಸಿದ್ದಯ್ಯ, ತಹಶೀಲ್ದಾರ್ ಎಲ್.ಎಂ.ನಂದೀಶ್, ತಾಲೂಕು ಪಂಚಾಯತ್ ಇ.ಓ.ದೊಡ್ಡಸಿದ್ದಪ್ಪ, ಡಯಟ್ ಪ್ರಾಂಶುಪಾಲ ವೈ.ಎನ್.ರಾಮಕೃಷ್ಣಯ್ಯ, ಬಿ.ಇ.ಓ ರಂಗಪ್ಪ, ಡಿವೈಪಿಸಿಗಳಾದ ಎಸ್.ರಾಜಕುಮಾರ್, ನರೇಂದ್ರ ಕುಮಾರ್, ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ, ರಾಜ್ಯ ಸಹಕಾರಿ ಮಹಿಳಾ ಮಂಡಳಿ ನಿರ್ದೇಶಕಿ ಸುವರ್ಣಮ್ಮ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಆನಂದ್ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪದ್ಮಾವತಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ವಿ.ಎಚ್.ವೆಂಕಟೇಶಯ್ಯ, ಖಜಾಂಚಿ ಚಿಕ್ಕರಂಗಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ, ಶಿಕ್ಷಣ ಸಂಯೋಜಕ ಪ್ರಾಣೇಶ್, ಪಿಡಿಓ ಗೌಡಪ್ಪ, ಬಿ.ಆರ್.ಪಿ ನೇತ್ರಾವತಿ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಮುರುಳಿಕೃಷ್ಣ, ಮುಖ್ಯ ಶಿಕ್ಷಕಿ ಕಾಂತಮ್ಮ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣ್ ರಾವ್, ಮುಖಂಡರಾದ ರಂಗ ಶಾಮಣ್ಣ, ಜಯರಾಮಯ್ಯ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.







