ಜೂಜು ಕೇಂದ್ರ, ಹೆಂಡ ಮಾರಾಟದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ: ವಿ.ಎಸ್.ಉಗ್ರಪ್ಪ

ತುಮಕೂರು, ಫೆ.23: ಜೂಜು ಕೇಂದ್ರ, ಹೆಂಡದ ಮಾರಾಟ ಹೆಚ್ಚಳದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆಯ ಸಂಪನ್ಮೂಲ ಕ್ರೋಡೀಕರಣದ ಹಿನ್ನೆಲೆ, ವಿದೇಶಿಯರ ಆಕರ್ಷಣೆಗಾಗಿ ಕ್ಯಾಸಿನೊದಂತಹ ಜೂಜು ಕೇಂದ್ರ ತೆರೆಯುವುದಾಗಿ ಸಚಿವರಾದ ಸಿ.ಟಿ.ರವಿ ಹೇಳುತ್ತಾರೆ. ಅಬಕಾರಿ ಮಂತ್ರಿಗಳು ಹೆಂಡದ ಮಾರಾಟ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ. ಸಂಪನ್ಮೂಲ ಸಂಗ್ರಹಕ್ಕೆ ಯುವಜನರಿಗೆ ಮಾರಕವಾದ ಜೂಜು ಕೇಂದ್ರಗಳು ಅಗತ್ಯವೇ ? ಇದೇನಾ ಬಿಜೆಪಿಯ ರಾಷ್ಟ್ರಪ್ರೇಮ ಎಂದು ಪ್ರಶ್ನಿಸಿದರು.
ಕರ್ನಾಟಕದ ಕರಾವಳಿ ತೀರ ಹಾಗು ಹಂಪಿ, ಸೋಮನಾಥಪುರ, ಬೇಲೂರು, ಹಳೇಬೀಡು ರೀತಿಯ ಭವ್ಯ ಕಲೆ ಪ್ರಕೃತಿ ಸಂಪತ್ತು ನಮ್ಮಲ್ಲಿ ಇರುವಾಗ, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಂಡ, ಜೂಜುಕೇಂದ್ರವೇ ಬೇಕೆ ? ಸರಕಾರ ಇದೇ ರೀತಿ ಮುಂದುವರೆದರೆ, ಜನ ನಿಮ್ಮ ವಿರುದ್ದ ತಿರುಗಿ ಬೀಳಲಿದ್ದಾರೆ ಎಂದು ಎಚ್ಚರಿಸಿದರು
ರಾಜ್ಯದ ನೆರೆ ಸಂತ್ರಸ್ತರಿಗೆ ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ನಿನ್ನೆ ಒಬ್ಬರು ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಈ ಸಾವಿನ ಹೊಣೆಯನ್ನು ಸಿಎಂ ಯಡಿಯೂರಪ್ಪ ಮತ್ತು ಅವರ ಸರಕಾರವೇ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು
ಗುತ್ತಿಗೆ ಶಿಕ್ಷಕರಿಗೆ ವೇತನ ನೀಡಲು, ವೃದಾಪ್ಯ, ಅಂಗವಿಕಲ, ವಿಧವಾ ವೇತನ ನೀಡಲು ಸರಕಾರದ ಬಳಿ ಹಣವಿಲ್ಲ. ಈಗಾಗಲೇ ದೇಶದ ಮೇಲೆ 91.1 ಲಕ್ಷ ಕೋಟಿ ಸಾಲ ಇದೆ. ಪುನಃ 8 ಲಕ್ಷ ಕೋಟಿ ಸಾಲ ಮಾಡಲಾಗುತ್ತಿದೆ. ವಿದೇಶಿ ಶೋಕಿಗೋಸ್ಕರ ದೇಶದ ತೆರಿಗೆ ಹಣ ಪೋಲಾಗುತ್ತಿದೆ. ಇದಕ್ಕೆಲ್ಲಾ ಮೋದಿಯವರ ತಪ್ಪು ಅರ್ಥಿಕ ನೀತಿಗಳೇ ಕಾರಣ. ಇದನ್ನು ಮರೆಮಾಚಲು ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಉಗ್ರಪ್ಪ ಆರೋಪಿಸಿದರು.
ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ. ರಾಷ್ಟ್ರ ವಿರೋಧಿಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ಕಾಂಗ್ರೆಸ್ ಪಕ್ಷದ ಬಗ್ಗೆ ಆಧಾರ ರಹಿತ ಆರೋಪವನ್ನು ಪಕ್ಷ ಎಂದಿಗೂ ಸಹಿಸದು ಎಂದರು.
ಇತ್ತೀಚೆಗೆ ಉತ್ತರಾಖಂಡ ಸರಕಾರದ ಕೇಸ್ ಒಂದಕ್ಕೆ ಸಂಬಂದಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಸಂವಿಧಾನದ ಕಲಂ 15ಎ ಗೆ ವಿರುದ್ಧವಾಗಿದೆ. ದೇಶದಲ್ಲಿ ಮನುವಾದ-ಅಂಬೇಡ್ಕರ್ ವಾದ, ಗಾಂಧಿ ವಾದ- ಗೋಡ್ಸೆ ವಾದದ ನಡುವೆ ಸಂಘರ್ಷ ಏರ್ಪಟ್ಟಿದೆ. ಕಾಂಗ್ರೆಸ್ ಅಂಬೇಡ್ಕರ್ ಮತ್ತು ಗಾಂಧಿ ವಾದವನ್ನು ಅನುಸರಿಸುತ್ತದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗು ಜಿ.ಪಂ ಸದಸ್ಯ ಕೆಂಚಮಾರಯ್ಯ, ಮುಖಂಡರಾದ ನಿರಂಜನ್, ಹೆಚ್.ಸಿ ಹನುಮಂತಯ್ಯ, ನರಸೀಯಪ್ಪ, ಮಂಜುನಾಥ್, ನಾಗರಾಜು ಉಪಸ್ಥಿತರಿದ್ದರು.







