ಹಾಸನ: ಬಿಸಿಲ ಬೇಗೆಯ ನಡುವೆ ಸಾರ್ವಜನಿಕರ ದಾಹ ನೀಗಿಸುತ್ತಿರುವ ಹೆಲ್ಮೆಟ್ ವ್ಯಾಪಾರಿ ಆರೀಫ್

ಹಾಸನ: ನಗರದಲ್ಲಿ ದಿನೇ ದಿನೇ ಬಿಸಿಲ ತಾಪ ಹೆಚ್ಚುತ್ತಿದೆ. ನಗರ ಪ್ರದೇಶದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ನಾನಾ ಕೆಲಸಗಳಿಗೆ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಹೆಲ್ಮೆಟ್ ವ್ಯಾಪಾರಿ ಆರಿಫ್.
ಹೌದು...ಆದೇಶ ನಗರದ ಆರೀಫ್ ರವರು ಬಸಟ್ಟಿಕೊಪ್ಪಲಿನ ರಸ್ತೆಯ ಬದಿಯಲ್ಲಿ ಹೆಲ್ಮೆಟ್ ಮಾರಾಟ ನಡೆಸುತ್ತ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ದಿನಕ್ಕೆ ಸಾವಿರಾರು ಮಂದಿ ಸಂಚರಿಸುವ ರಸ್ತೆ ಇದಾಗಿದ್ದು, ಆರಿಫ್ ಮಾಡಿರುವ ಕುಡಿಯುವ ನೀರಿನ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಬಹಳ ಉಪಯೋಗವಾಗುತ್ತಿದೆ ಎಂಬುವುದು ಸ್ಥಳೀಯರ ಮಾತು.
ಬೇಸಿಗೆ ಬಂದರೆ ಅಂಗಡಿಗಳಲ್ಲಿ ನೀರನ್ನು ಕೂಡ ಹಣ ಕೊಟ್ಟು ಕೊಂಡುಕೊಳ್ಳಬೇಕು. ಪುಕ್ಕಟೆಯಾಗಿ ಕೊಡುವವರು ತೀರಾ ಅಪರೂಪ. ಆದರೆ ಆರಿಫ್ ಅವರು ಕಳೆದ ಒಂದು ವಾರದಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಉಚಿತವಾಗಿ ಮಾಡುತ್ತಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
"ಅದೊಂದು ದಿನ ನನಗೂ ಸಹ ನೀರಿನ ದಾಹ ಏನೆಂಬುವುದು ಅನುಭವವಾಗಿದೆ. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ದಾಹದಿಂದ ಬಳಲುತ್ತಿರುವಾಗ ಒಂದು ಮನೆಯಲ್ಲಿ ನೀರು ಕೇಳಿದೆ. ನೀರು ಕೊಡಲು ಆ ಮನೆಯವರು ನಿರಾಕರಿಸಿದ್ದರು. ನೀರು ನೀಡಲು ಯಾಕೆ ನಿರಾಕರಿಸಿದರು ಎಂದು ಇದುವರೆಗೂ ನನಗೆ ತಿಳಿದಿಲ್ಲ ಎಂದು ನಗುಮುಖದಲ್ಲಿ ಮಾತನಾಡುತ್ತ ಆರೀಫ್ ಹೇಳಿದರು. ನಗರದಲ್ಲಿ ಜನ ಸಾಂದ್ರತೆ ಇರುವಂತಹ ಹಲವು ಕಡೆ ಈ ರೀತಿಯ ಸೌಲಭ್ಯವನ್ನು ಕಲ್ಪಿಸಿದರೆ ಸಾರ್ವಜನಿಕರಿಗೆ ಬಹಳ ಉಪಯೋಗವಾಗುತ್ತದೆ ಎಂಬುವುದು ಆರಿಫ್ ರವರ ಅಭಿಪ್ರಾಯ.








