‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ 100 ಕೋ. ರೂ. ವೆಚ್ಚ ಮಾಡುತ್ತಿರುವವರು ಯಾರು?: ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ, ಫೆ. 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಆಯೋಜಿಸಲು 100 ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವ ಸಚಿವಾಲಯ ಯಾವುದು ಎಂದು ಪ್ರಶ್ನಿಸಿದ್ದಾರೆ.
ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಬೃಹತ್ ಕಾರ್ಯಕ್ರಮ ‘ನಮಸ್ತೇ ಟ್ರಂಪ್’ ಆಯೋಜಿಸುತ್ತಿರುವ ಸಮಿತಿಯ ಪಾತ್ರದ ಬಗ್ಗೆ ಪ್ರಿಯಾಂಕಾ ಗಾಂಧಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
‘‘ಡೊನಾಲ್ಡ್ ಟ್ರಂಪ್ ಭೇಟಿ ಕಾರ್ಯಕ್ರಮಕ್ಕೆ 100 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಈ ಹಣವನ್ನು ಸಮಿತಿಯ ಮೂಲಕ ವೆಚ್ಚ ಮಾಡಲಾಗುತ್ತಿದೆ. ಸದಸ್ಯರಿಗೆ ತಾವು ಸಮಿತಿಯ ಸದಸ್ಯರು ಎಂಬುದು ಕೂಡ ತಿಳಿದಿಲ್ಲ. ಈ ಸಮಿತಿಗೆ ಯಾವ ಸಚಿವಾಲಯ ಹಣ ನೀಡಿತು ಎಂಬುದನ್ನು ತಿಳಿದುಕೊಳ್ಳಲು ದೇಶಕ್ಕೆ ಹಕ್ಕಿಲ್ಲವೇ ? ಸಮಿತಿಯ ಸೋಗಿನಲ್ಲಿ ಸರಕಾರ ಏನನ್ನು ಮರೆ ಮಾಚುತ್ತಿದೆ ?’’ ಎಂದು ಅವರು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಈ ವಿಷಯ ಕುರಿತಂತೆ ಅವರು ಟ್ವೀಟ್‌ನೊಂದಿಗೆ ಹಿಂದಿ ಸುದ್ದಿಯ ತುಣಕನ್ನು ಕೂಡ ಅಪ್‌ಲೋಡ್ ಮಾಡಿದ್ದಾರೆ.
‘ನಮಸ್ತೇ ಟ್ರಂಪ್’ ಕಾರ್ಯಕ್ರಮವನ್ನು ಡೊನಾಲ್ಡ್ ಟ್ರಂಪ್ ನಾಗರಿಕ ಅಭಿನಂದನಾ ಸಮಿತಿ ಆಯೋಜಿಸುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕುಟುಂಬದೊಂದಿಗೆ ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 24ರಂದು ಭಾರತಕ್ಕೆ ಆಗಮಿಸಲಿದ್ದಾರೆ.







