ದಕ್ಷಿಣ ಆಫ್ರಿಕಾ ತಂಡ ಪ್ರಕಟ: ಪ್ಲೆಸಿಸ್ಗೆ ವಿಶ್ರಾಂತಿ
ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ
ಕೇಪ್ಟೌನ್, ಫೆ.26: ಆಸ್ಟ್ರೇಲಿಯ ವಿರುದ್ಧ ಶನಿವಾರ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಎಫ್ಡು ಪ್ಲೆಸಿಸ್ರನ್ನು ದಕ್ಷಿಣ ಆಫ್ರಿಕಾ ತಂಡದಿಂದ ಮತ್ತೊಮ್ಮೆ ಕೈಬಿಡಲಾಗಿದೆ. ಭವಿಷ್ಯದ ಯೋಜನೆಯಲ್ಲಿ ಹಿರಿಯ ಬ್ಯಾಟ್ಸ್ ಮನ್ ತಂಡದಲ್ಲಿ ಉಳಿಯಲಿದ್ದಾರೆ ಎಂದು ಕೋಚ್ ಮಾರ್ಕ್ ಬೌಚರ್ ಸ್ಪಷ್ಟಪಡಿಸಿದ್ದಾರೆ.
ಈ ತಿಂಗಳಾರಂಭದಲ್ಲಿ ಇಂಗ್ಲೆಂಡ್ ವಿರುದ್ಧ 1-1ರಿಂದ ಡ್ರಾಗೊಂಡ ಏಕದಿನ ಸರಣಿಯಿಂದ ಮಾಜಿ ನಾಯಕ ಡು ಪ್ಲೆಸಿಸ್ ಹೊರಗುಳಿದಿದ್ದರು. ಬುಧವಾರ ಕೊನೆಗೊಂಡಿರುವ ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಪ್ಲೆಸಿಸ್ಗೆ ಸ್ಥಾನ ನೀಡಲಾಗಿತ್ತು. ‘‘2019ರ ಕ್ರಿಕೆಟ್ ವಿಶ್ವಕಪ್ ಮುಗಿದಿದೆ. ಇನ್ನೊಂದು ವಿಶ್ವಕಪ್ಗೆ ಇನ್ನೂ ಮೂರು ವರ್ಷಗಳ ಬಾಕಿ ಇದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧ ಸರಣಿಯು ಕೆಲವು ಹೊಸ ಪ್ರತಿಭೆಗಳಿಗೆ ಇರುವ ಅವಕಾಶ ಎಂದು ನಾವು ಭಾವಿಸಿದ್ದೇವೆ. ಸೀಮಿತ ಓವರ್ ಕ್ರಿಕೆಟ್ನಲ್ಲಿ ಪ್ಲೆಸಿಸ್ ಓರ್ವ ಉತ್ತಮ ಆಟಗಾರ. ಅವರು ನಮ್ಮ ಏಕದಿನ ಕ್ರಿಕೆಟ್ ಯೋಜನೆಯ ಭಾಗವಾಗಿರುತ್ತಾರೆ. ಭವಿಷ್ಯದ ದೃಷ್ಟಿಯಿಂದ ಅವರ ಕೆಲಸದ ಭಾರವನ್ನು ನಿಭಾಯಿಸುತ್ತಿದ್ದೇವೆ’’ ಎಂದು ಬೌಚರ್ ಹೇಳಿದ್ದಾರೆ. 2018ರಲ್ಲಿ ಶ್ರೀಲಂಕಾ ವಿರುದ್ಧ 4 ಏಕದಿನ ಪಂದ್ಯಗಳಲ್ಲಿ ಆಡಿದ್ದ ಸ್ಪಿನ್ನರ್ ಕೇಶವ ಮಹಾರಾಜ್ ತಂಡಕ್ಕೆ ವಾಪಸಾಗಿದ್ದಾರೆ.
ಪ್ಲೆಸಿಸ್ ಜೊತೆಗೆ ರಾಸ್ಸಿ ವಾಂಡರ್ ಡುಸ್ಸಾನ್ ಹಾಗೂ ಆಲ್ರೌಂಡರ್ ಡ್ವೈಯ್ನಾ ಪ್ರಿಟೋರಿಯಸ್ಗೆ ವಿಶ್ರಾಂತಿ ನೀಡಲಾಗಿದೆ. ತಂಡವನ್ನು ಕ್ವಿಂಟನ್ ಡಿಕಾಕ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಶನಿವಾರದಿಂದ ಪಾರ್ಲ್ನಲ್ಲಿ ಸರಣಿ ಆರಂಭವಾಗಲಿದೆ. ಬ್ಲೋಮ್ಫೊಂಟೈನ್ನಲ್ಲಿ ಬುಧವಾರ ಹಾಗೂ ಪೊಚೆಫ್ಸ್ಟ್ರೂಮ್ನಲ್ಲಿ ಮಾ.7ರಂದು ಇನ್ನೆರಡು ಪಂದ್ಯಗಳು ನಡೆಯಲಿವೆ