ರಾಜ ಧರ್ಮ ಪಾಲಿಸಿ ಅಮಿತ್ ಶಾ ರನ್ನು ವಜಾಗೊಳಿಸಿ: ರಾಷ್ಟ್ರಪತಿಗೆ ಕಾಂಗ್ರೆಸ್ ಆಗ್ರಹ
ದಿಲ್ಲಿ ಹಿಂಸಾಚಾರ

ಹೊಸದಿಲ್ಲಿ, ಫೆ. 27: ದಿಲ್ಲಿಯಲ್ಲಿ ರವಿವಾರ ಸಂಜೆ ಆರಂಭಗೊಂಡ ಹಿಂಸಾಚಾರವನ್ನು ನಿಯಂತ್ರಿಸಲು ಅಸಮರ್ಥರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹುದ್ದೆಯಿಂದ ಕೂಡಲೇ ವಜಾಗೊಳಿಸುವಂತೆ ಕಾಂಗ್ರೆಸ್ ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಆಗ್ರಹಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಪಕ್ಷದ ನಿಯೋಗ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಜ್ಞಾಪನಾ ಪತ್ರವನ್ನು ಸಲ್ಲಿಸಿತು. ‘‘ನಾಗರಿಕರ ಜೀವ, ಸ್ವಾತಂತ್ರ್ಯ ಹಾಗೂ ಸೊತ್ತಿನ ಸಂರಕ್ಷಣೆಯ ಖಾತರಿ ನೀಡಬೇಕೆಂದು ನಾವು ನಿಮ್ಮನ್ನು ಆಗ್ರಹಿಸುತ್ತೇವೆ’’ ಎಂದು ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ಭವನದಿಂದ ಹಿಂದಿರುಗಿದ ಬಳಿಕ ತಿಳಿಸಿದರು.
ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಅಸಮರ್ಥರಾದ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ವಜಾಗೊಳಿಸುವಂತೆ ಕೂಡಲೇ ಒತ್ತಾಯಿಸಬೇಕು ಎಂದು ನಾವು ಪುನರುಚ್ಚರಿಸುತ್ತೇವೆ ಎಂದು ಅವರು ಹೇಳಿದರು. ನಿಯೋಗದಲ್ಲಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ‘ರಾಜಧರ್ಮ’ವನ್ನು ರಕ್ಷಿಸಲು ತಮ್ಮ ಅಧಿಕಾರ ಬಳಸುವ ಬಗ್ಗೆ ಪಕ್ಷ ಕೋವಿಂದ್ ಅವರನ್ನು ಒತ್ತಾಯಿಸಿದೆ.
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡದ ಸಂದರ್ಭ ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ತೆಗೆದುಕೊಂಡ ಕ್ರಮದ ಬಗ್ಗೆ ಪ್ರಶ್ನಿಸಿದ ಸಂದರ್ಭ ಬಳಸಿದ ಜನಪ್ರಿಯ ಹಿಂದಿ ಪದ ‘ರಾಜಧರ್ಮ’ ಅಥವಾ ‘ನಾಯಕನ ಕರ್ತವ್ಯ’ ಎಂಬುದು ಎಂದರು. ನಿಯೋಗದ ಆಗ್ರಹಗಳನ್ನು ಪರಿಗಣಿಸುತ್ತೇನೆ ಎಂದು ರಾಷ್ಟ್ರಪತಿ ಅವರು ತಿಳಿಸಿರುವುದರಿಂದ ಪಕ್ಷ ತೃಪ್ತಿ ಹೊಂದಿದೆ ಎಂದು ಸೋನಿಯಾ ಗಾಂಧಿ ಹೇಳಿದರು.







