ಮೂರು ಸಕ್ಕರೆ ಕಾರ್ಖಾನೆಗಳು ಖಾಸಗಿಯವರಿಗೆ: ಸಚಿವ ಶಿವರಾಮ್ ಹೆಬ್ಬಾರ್

ಬೆಂಗಳೂರು, ಫೆ. 27: ಪಾಂಡವಪುರ, ಕೊಪ್ಪ ಮತ್ತು ಮಂಡ್ಯ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಸಕ್ಕರೆ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿನ ಕೊಠಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ಮಾಡಿಸುವುದು ನಮ್ಮ ಆದ್ಯತೆ. ಜತೆಗೆ ಖಾಸಗಿಯವರಿಗೆ ವಹಿಸಲಿರುವ ಮೂರು ಕಾರ್ಖಾನೆಗಳನ್ನು ಜೂನ್ ಒಳಗೆ ಹಸ್ತಾಂತರ ಪ್ರಕ್ರಿಯೆ ಮುಗಿಸಿದರೆ ರೈತರ ಕಬ್ಬು ಸರಬರಾಜಿಗೆ ಅನುಕೂಲವಾಗಲಿದೆ ಎಂದರು.
ಒತ್ತಡ ಪ್ರಶ್ನೆಯೇ ಇಲ್ಲ: ರಾಜ್ಯದಲ್ಲಿ ಎಲ್ಲ ಪಕ್ಷಗಳ ಶಾಸಕರೂ ಸಕ್ಕರೆ ಕಾರ್ಖಾನೆ ಮಾಲಕರಿದ್ದು, ನಮ್ಮ ಪಕ್ಷದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಬ್ಬಿನ ಬಾಕಿ ಪಾವತಿ ಸಂಬಂಧ ಕೇಂದ್ರದ ಕಾಯ್ದೆ ಜಾರಿಗೊಳಿಸಿದೆ. ಹೀಗಾಗಿ ಒತ್ತಡದ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
‘ಕಾರ್ಮಿಕ ಇಲಾಖೆ ಹಣದ ಮೇಲೆ ಸರಕಾರದ ಕಣ್ಣು’ ಎಂದು ಮಾಧ್ಯಮಗಳಲ್ಲಿ ವರದಿ, ಸತ್ಯಕ್ಕೆ ದೂರವಾದದು. ಕಾರ್ಮಿಕ ಇಲಾಖೆಯಿಂದ ಹಣ ಪಡೆಯುವ ಅಗತ್ಯ ಸರಕಾರಕ್ಕೆ ಇಲ್ಲ. ಈಗಾಗಲೇ ಎಲ್ಲ ಇಲಾಖೆಗಳಲ್ಲಿ ಹೆಣ್ಣು ಮಕ್ಕಳು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಅನುಕೂಲ ಆಗುವಂತೆ ಕಾಯ್ದೆಗೆ ತಿದ್ದುಪಡಿ ಮಾಡಿ ಮಂಡಿಸಲಾಗಿದೆ ಎಂದರು.
ಕೃಷಿ ಕಾರ್ಮಿಕರಿಗೂ ಉದ್ಯೋಗ ಕಾರ್ಡ್ ನೀಡುವ ಚಿಂತನೆ ಇದೆ. ಈ ಸಂಬಂಧ ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾರ್ಮಿಕ ಸ್ನೇಹಿ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಶಿವರಾಮ್ ಹೆಬ್ಬಾರ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.







