ಫೇಸ್ಬುಕ್ನಲ್ಲಿ ಮೋದಿ ವಿರುದ್ಧ ಅವಹೇಳನಾತ್ಮಕ ಪೋಸ್ಟ್ ಆರೋಪ ; ಶಿಕ್ಷಕನ ಬಂಧನ

ಸಾಂದರ್ಭಿಕ ಚಿತ್ರ
ಗುವಾಹಟಿ, ಫೆ.29: ಶಿಕ್ಷಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಾತ್ಮಕ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂಧಿಸಿದ ಘಟನೆ ಅಸ್ಸಾಂನ ಸಿಲ್ಚಾರ್ನಲ್ಲಿ ನಡೆದಿದೆ.
ಸಿಲ್ಚಾರ್ನ ಗುರುಚರಣ್ ಕಾಲೇಜಿನ ಅತಿಥಿ ಉಪನ್ಯಾಸಕ ಸೌರದೀಪ್ ಸೇನ್ ಗುಪ್ತಾ ‘ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ಪ್ರಧಾನಿ ಮೋದಿ ಜನಸಮೂಹವನ್ನು ಕೊಲೆಮಾಡಿದವರು ಎಂದು ನಿಂದಿಸಿದ್ದಾರೆ . ಅಲ್ಲದೆ ಸನಾತನ ಧರ್ಮ, ಬಿಜೆಪಿ, ಆರೆಸ್ಸೆಸ್ ವಿರುದ್ಧ ಕೆಟ್ಟ ಶಬ್ದ ಬಳಸಿದ್ದು ಈ ಹಿಂದೂ ಸಂಘಟನೆಗಳು 2002ರ ಗೋಧ್ರಾ ಹಿಂಸಾಚಾರ ಮತ್ತೆ ನಡೆಯಬೇಕೆಂಬ ಪ್ರಯತ್ನ ಮುಂದುವರಿಸಿವೆ ಎಂದು ಆರೋಪಿಸಿದ್ದಾರೆ. ಹಿಂದು ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಪೋಸ್ಟ್ ಮಾಡಿ ಕೋಮು ಹಿಂಸಾಚಾರ ಕೆರಳಿಸುವ ಹುನ್ನಾರ ನಡೆಸಿದ್ದಾರೆ’ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದರು. ದಿಲ್ಲಿಯಲ್ಲಿ ನಡೆದ ಕೋಮು ಘರ್ಷಣೆಗೆ ಹಿಂದುಗಳು ಕಾರಣ ಎಂದು ಸೇನ್ಗುಪ್ತಾರ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಲಾಗಿದೆ. ವಿನಾಶಕಾರಿ ಸಿದ್ಧಾಂತವನ್ನು ಬಳಸಿ ಇವರು ಹಲವು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದ್ದು, ಶಿಕ್ಷಕ ಹುದ್ದೆಯಲ್ಲಿ ಮುಂದುವರಿದರೆ ಇನ್ನಷ್ಟು ವಿದ್ಯಾರ್ಥಿಗಳನ್ನು ತಪ್ಪು ಹಾದಿಗೆ ಎಳೆಯಲು ಪ್ರಯತ್ನಿಸಬಹುದು ಎಂದು ವಿದ್ಯಾರ್ಥಿಗಳು ಕಾಲೇಜಿನ ಆಡಳಿತವರ್ಗಕ್ಕೆ ದೂರು ನೀಡಿದ್ದರು.
ವಿದ್ಯಾರ್ಥಿಗಳು ನೀಡಿದ ದೂರು ಹಾಗೂ ಸೇನ್ಗುಪ್ತಾ ವಿರುದ್ಧ ದಾಖಲಿಸಿರುವ ಎಫ್ಐಆರ್ನ ಪ್ರತಿಯನ್ನು ಎಬಿವಿಪಿ ಸಿಲ್ಚಾರ್ ಘಟಕದ ಕಾರ್ಯದರ್ಶಿ ಕರಣ್ಜಿತ್ ದೇವ್ ತನ್ನ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ವಿದ್ಯಾರ್ಥಿಗಳು ದೂರು ನೀಡಿದ ಬಳಿಕ ಸೇನ್ಗುಪ್ತಾ ತನ್ನ ಪೋಸ್ಟ್ ಅನ್ನು ಅಳಿಸಿಹಾಕಿದ್ದಾರೆ ಎಂದು ವರದಿ ತಿಳಿಸಿದೆ.





